ಬಿಹಾರ ಚುನಾವಣಾ ವಿಜಯೋತ್ಸವ ವೇಳೆ ಬಿಜೆಪಿ ಕಾರ್ಯಕರ್ತರಿಂದ ಮಸೀದಿಯಲ್ಲಿ ದಾಂಧಲೆ

Prasthutha|

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಅಭ್ಯರ್ಥಿಯ ಪರವಾಗಿ ವಿಜಯ ಯಾತ್ರೆ ನಡೆಸುವ ವೇಳೆ ಪಕ್ಷದ ಕಾರ್ಯಕರ್ತರು ಮಸೀದಿಯೊಂದರಲ್ಲಿ ದಾಂಧಲೆ ನಡೆಸಿದ ಘಟನೆ ವರದಿಯಾಗಿದೆ. ಈ ವೇಳೆ ಮಸೀದಿಯೊಳಗೆ ಪ್ರಾರ್ಥನೆ ಮಾಡುತ್ತಿದ್ದ ಐವರ ಮೇಲೆ ಗಂಭೀರ ಹಲ್ಲೆ ನಡೆಸಿದ ಬಗ್ಗೆಯೂ ತಿಳಿದುಬಂದಿದೆ.

ಪೂರ್ವ ಚಂಪಾರನ್ ಜಿಲ್ಲೆಯ ಜಮುವಾ ಗ್ರಾಮದಲ್ಲಿ ನ.11ರಂದು ಈ ಘಟನೆ ನಡೆದಿದೆ. ಘಟನೆಯ ಸಂದರ್ಭ ಕೆಲವು ವಾಹನಗಳನ್ನು ಜಖಂ ಮಾಡಲಾಗಿದೆ. ಮಸೀದಿಯ ಧ್ವನಿ ವರ್ಧಕ ಹಾಗೂ ಎರಡು ಗೇಟುಗಳನ್ನೂ ಮುರಿದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

- Advertisement -

ಬಿಜೆಪಿ ನಾಯಕ ಪವನ್ ಕುಮಾರ್ ಜೈಸ್ವಾಲ್ ಗೆದ್ದಿರುವ ಢಾಕಾ ವಿಧಾನಸಭಾ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ.

ಜೈಸ್ವಾಲ್ ಗೆಲುವನ್ನು ಸಂಭ್ರಮಿಸುತ್ತಿದ್ದ ಸುಮಾರು 500 ಮಂದಿ ಮಸೀದಿ ಬಳಿ ಪ್ರಾರ್ಥನೆ ಸಲ್ಲಿಸುತ್ತಿದ್ದವರ ಮೇಲೆ ಕಲ್ಲೆಸೆದಿದ್ದಾರೆ. ಮಸೀದಿ ಹತ್ತಿರ ಬರುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಗೇಟುಗಳು ಹಾಗೂ ಧ್ವನಿವರ್ಧಕಗಳನ್ನು ಒಡೆದಿದ್ದಾರೆ ಎಂದು ಮಸೀದಿ ಉಸ್ತುವಾರಿ ಮಝರ್ ಆಲಂ ಹೇಳಿದ್ದಾರೆ.

ಈ ಮಸೀದಿ ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದು, ಗ್ರಾಮದಲ್ಲಿ 20-25 ಮುಸ್ಲಿಂ ಕುಟುಂಬಗಳಿವೆ. “ಇದು ನಿಮ್ಮ ದೇಶವಲ್ಲವೆಂದು ಹೇಳುತ್ತಾ, ನಮಗೆ ಈ ದೇಶ ಬಿಟ್ಟು ತೆರಳಲು ಅವರು ಹೇಳಿದರು’’ ಎಂದು ಮಝರ್ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.

ಮೆರವಣಿಗೆ ಮಸೀದಿ ಸಮೀಪ ಬರುತ್ತಿದ್ದಾಗ, ಮಸೀದಿ ಹೊರಗೆ ಅಂಗಡಿ ಹೊಂದಿದ್ದ ವ್ಯಕ್ತಿಯೊಬ್ಬರು, ಮಸೀದಿಯೊಳಗೆ ಪ್ರಾರ್ಥನೆ ನಡೆಯುತ್ತಿರುವುದರಿಂದ ಧ್ವನಿ ವರ್ಧಕ ನಿಲ್ಲಿಸುವಂತೆ ಕೋರಿಕೊಂಡರು. ಆ ವಿಷಯದಲ್ಲಿ ವಾಗ್ವಾದ ನಡೆದು, ಮೆರವಣಿಗೆಯಲ್ಲಿದ್ದವರು ಕಲ್ಲೆಸೆದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

- Advertisement -