ನವದೆಹಲಿ: ಫೆಬ್ರವರಿ 3 ರಂದು ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಮೇಲೆ ನಡೆದ ಗುಂಡಿನ ದಾಳಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ ಮತ್ತು ಕೇಂದ್ರ ಸರ್ಕಾರ ನೀಡಿದ ಝೆಡ್ ಪ್ಲಸ್ ಭದ್ರತೆಯನ್ನು ಸ್ವೀಕರಿಸುವಂತೆ ಮನವಿ ಮಾಡಿದ್ದಾರೆ
“ಅಂತಹ ದಾಳಿಯ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಒಂದು ಕಾರು ಮತ್ತು ಎರಡು ಪಿಸ್ತೂಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಫೋರೆನ್ಸಿಕ್ ತಂಡವು ಘಟನೆಯ ತನಿಖೆ ನಡೆಸುತ್ತಿದೆ. ಉತ್ತರ ಪ್ರದೇಶ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ರಾಜ್ಯಸಭೆಯ ಕಲಾಪದ ವೇಳೆ ಅಮಿತ್ ಶಾ ಹೇಳಿದರು.
ಕಳೆದ ವಾರ, ಪಶ್ಚಿಮ ಉತ್ತರ ಪ್ರದೇಶದ ಹಾರ್ ಪುರ್ ನಲ್ಲಿ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ (ಎಐಎಂಐಎಂ) ಮುಖ್ಯಸ್ಥ ಉವೈಸಿಯವರ ಕಾರಿನ ಮೇಲೆ ಗುಂಡು ಹಾರಿಸಲಾಗಿತ್ತು. ಉವೈಸಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಮುಗಿಸಿ ದೆಹಲಿಗೆ ಮರಳುತ್ತಿದ್ದಾಗ ಈ ಕೃತ್ಯ ನಡೆದಿತ್ತು.
ಕೊಲೆ ಯತ್ನದ ಆರೋಪದಲ್ಲಿ ಸಚಿನ್ ಮತ್ತು ಶುಭಂ ಎಂದು ಎಂಬಿಬ್ಬರನ್ನು ಬಂಧಿಸಲಾಗಿದ್ದು, ಇವರು ಗೌತಮ್ ಬುದ್ಧ ನಗರ ಮತ್ತು ಸಹರಾನ್ಪುರ ನಿವಾಸಿಗಳಾಗಿದ್ದಾರೆ. ದಾಳಿಕೋರರ ಬಳಿಯಿದ್ದ ಎರಡು ಪಿಸ್ತೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರುತಿ ಆಲ್ಟೊ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಒಂದು ದಿನದ ನಂತರ, ಕೇಂದ್ರವು ಉವೈಸಿಗೆ ‘Z’ ವರ್ಗದ ಭದ್ರತೆಯನ್ನು ನೀಡುವುದಾಗಿ ತಿಳಿಸಿತ್ತು. ಆದರೆ ಉವೈಸಿ ಅದನ್ನು ತಿರಸ್ಕರಿಸಿ “ನನಗೆ ಝಡ್ ಕೆಟಗರಿ ಭದ್ರತೆ ಬೇಡ. ನಾನು ನಿಮ್ಮೆಲ್ಲರಿಗೂ ಸಮನಾಗಿ ಎ ಕೆಟಗರಿ ಪ್ರಜೆಯಾಗಲು ಬಯಸುತ್ತೇನೆ. ನನ್ನ ಮೇಲೆ ಗುಂಡು ಹಾರಿಸಿದವರ ವಿರುದ್ಧ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ) ಏಕೆ ಜಾರಿ ಮಾಡಲಿಲ್ಲ? …ನಾನು ಬದುಕಲು ಬಯಸುತ್ತೇನೆ. ಬಡವರು ಸುರಕ್ಷಿತವಾಗಿದ್ದಾಗ ನನ್ನ ಜೀವನ ಸುರಕ್ಷಿತವಾಗಿರುತ್ತದೆ. ನನ್ನ ಕಾರಿಗೆ ಗುಂಡು ಹಾರಿಸಿದವರಿಗೆ ನಾನು ಹೆದರುವುದಿಲ್ಲ” ಎಂದು ಉವೈಸಿ ಕಳೆದ ವಾರ ಲೋಕಸಭೆಯಲ್ಲಿ ಹೇಳಿದ್ದರು.
ದಾಳಿಯ ಬಗ್ಗೆ ಚುನಾವಣಾ ಆಯೋಗ ಸ್ವತಂತ್ರ ತನಿಖೆ ನಡೆಸಬೇಕು ಎಂದು ಉವೈಸಿ ಒತ್ತಾಯಿಸಿದ್ದರು.