ಸ್ಟಾರ್ ಪ್ರಚಾರಕರಿಗೆ ಸೂಕ್ತ ಭದ್ರತೆ ಒದಗಿಸಲು ಸೂಚನೆ, ರಾಜ್ಯ ಸರ್ಕಾರಗಳಿಗೆ ಪತ್ರ ಬರೆದ ಕೇಂದ್ರ ಚುನಾವಣಾ ಆಯೋಗ

Prasthutha|

ನವದೆಹಲಿ; ಆಲ್ ಇಂಡಿಯಾ ಮಜ್ಲಿಸ್ – ಇ- ಇತ್ತಿಹಾದುಲ್ ಮುಸ್ಲಿಮೀನ್, ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಕಾರಿನ ಮೇಲೆ ಗುಂಡಿನ ದಾಳಿ ನಡೆದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಚುನಾವಣಾ ಆಯೋಗ ಎಲ್ಲಾ ತಾರಾ ಪ್ರಚಾರಕರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಚುನಾವಣೆ ಹೊಸ್ತಿಲಲ್ಲಿರುವ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.
ಈ ಕುರಿತು ಫೆಬ್ರವರಿ 5ರಂದು ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥರು ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಚುನಾವಣಾ ಆಯೋಗ ಪತ್ರ ಬರೆದಿದ್ದು, ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ರಾಜ್ಯಗಳಲ್ಲಿ ಸ್ಟಾರ್ ಪ್ರಚಾರಕರ ಭದ್ರತೆಯಲ್ಲಿ ಲೋಪವಾಗಿದ್ದು, ಇದು ಗಂಭೀರ ವಿಚಾರ ಎಂದು ಹೇಳಿದೆ.
ಸ್ಟಾರ್ ಪ್ರಚಾರಕರು ಚುನಾವಣಾ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ಅವರ ಭದ್ರತೆಯು ಅತ್ಯಂತ ಮಹತ್ವದ್ದಾಗಿದೆ ಎಂದು ಚುನಾವಣಾ ಆಯೋಗ ಪ್ರತಿಪಾದಿಸಿದೆ. ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ರಾಜಕೀಯ ಪಕ್ಷಗಳು ನೇಮಿಸಿದ ಸ್ಟಾರ್ ಪ್ರಚಾರಕರಿಗೆ ಚುನಾವಣೆ ನಡೆಯುವ ಅವಧಿಯಲ್ಲಿ ರಾಜ್ಯದೊಳಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ಎಂದು ಪತ್ರದಲ್ಲಿ ಸೂಚನೆ ನೀಡಲಾಗಿದೆ.
ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಟಾರ್ ಪ್ರಚಾರಕರ ಭದ್ರತಾ ವ್ಯವಸ್ಥೆಗಳನ್ನು ರಾಜ್ಯ ಸರ್ಕಾರಗಳಿಂದ ನೇಮಕವಾಗುವ ನೋಡಲ್ ಅಧಿಕಾರಿಗಳು ಮೇಲ್ವಿಚಾರಣೆ ಮಾಡಲಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಅದಾಗಿಯೂ ಉವೈಸಿ ಮೇಲೆ ‌ನಡೆದ ಗುಂಡಿನ ದಾಳಿ ಸೇರಿದಂತೆ ಯಾವುದೇ ಪ್ರತ್ಯೇಕ ಪ್ರಕರಣವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿಲ್ಲ



Join Whatsapp