ಅಹಮದಾಬಾದ್: ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕಾಗಿ ಪತಿ ತನ್ನನ್ನು ತ್ಯಜಿಸಿದ್ದಾನೆ ಎಂದು ಆರೋಪಿಸಿ ಅಹಮದಾಬಾದ್ ನ ಕಲುಪುರ್ ನಿವಾಸಿಯಾದ 37 ವರ್ಷದ ಮಹಿಳೆಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾರೆ.
2012 ರಲ್ಲಿ ಮುಂಬೈ ನಿವಾಸಿಯೊಂದಿಗೆ ಯುವತಿಯ ಮದುವೆ ನಡೆದಿತ್ತು. 2013 ರಲ್ಲಿ ಗರ್ಭಿಣಿಯಾದಾಗ ತನ್ನ ಗಂಡನ ಮನೆಯವರು ಮಗುವಿನ ಲಿಂಗ ಪತ್ತೆ ನಡೆಸಿ, ಹೆಣ್ಣು ಮಗು ಎಂದು ತಿಳಿದಾಗ, ಗರ್ಭಪಾತ ಮಾಡಲು ಒತ್ತಾಯಪಡಿಸಿ ಗಂಡನ ತಾಯಿ ತನ್ನನ್ನು ಹೊಡೆದಿದ್ದರು ಎಂದು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಗಂಡನ ಮನೆಯಿಂದ ತಪ್ಪಿಸಿಕೊಂಡ ಮಹಿಳೆ ತನ್ನದೇ ಮನೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
2014 ಡಿಸೆಂಬರ್ ನಲ್ಲಿ ನಾದಿನಿಯ ಮದುವೆಗಾಗಿ ಯುವತಿಯನ್ನು ಗಂಡನ ಮನೆಗೆ ಕರೆದೊಯ್ಯಲಾಯಿತು. ಎರಡು ವರ್ಷಗಳ ನಂತರ, ಮಗುವನ್ನು ನರ್ಸರಿಗೆ ಸೇರಿಸಲು ಹಣ ಕೇಳಿದಾಗ ನೀಡಲಿಲ್ಲ. ಅದರ ನಂತರ ಆಕೆಯನ್ನು ಮತ್ತು ಮಗುವನ್ನು ಬಿಟ್ಟು ಆತ ಹೊರಟು ಹೋಗಿದ್ದನು. ನಾಲ್ಕು ವರ್ಷಗಳ ನಂತರ, ತನ್ನ ಪತಿಯ ಸಹೋದರನ ಫೇಸ್ ಬುಕ್ ಪೋಸ್ಟ್ ಮೂಲಕ, ಆತ ಯುಎಸ್ ನಲ್ಲಿ ನೆಲೆಸಿದ್ದಾಗಿ ತಿಳಿದು ಬಂದಿದೆ ಎಂದು ಮಹಿಳೆ ಹೇಳಿದ್ದಾರೆ. ಮಹಿಳೆ ಈಗ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ಕೌಟುಂಬಿಕ ಹಿಂಸೆಯ ದೂರು ದಾಖಲಿಸಿದ್ದಾಳೆ.