ನವದೆಹಲಿ: ಭಾರತವನ್ನು ಶ್ರೀಮಂತ ಮತ್ತು ಬಡವರ ನಡುವೆ ವಿಭಜಿಸಲಾಗಿದೆ ಮತ್ತು ಅವುಗಳ ನಡುವಿನ ಅಂತರ ವೃದ್ಧಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಒಕ್ಕೂಟ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಲೋಕಸಭೆಯಲ್ಲಿ ವಿರೋಧ ಪಕ್ಷದ ಕಡೆಯಿಂದ ಮೊದಲು ಮಾತನಾಡಿದ ಅವರು, ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾಡಿದ ಭಾಷಣವು ದೇಶ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಬೆಳಕು ಚೆಲ್ಲಿಲ್ಲ ಮತ್ತು ಅಧಿಕಾರಶಾಹಿಗಳ ಪರವಾಗಿದೆ ಎಂದು ಕಿಡಿಕಾರಿದರು.
ಅಧ್ಯಕ್ಷೀಯ ಭಾಷಣದಲ್ಲಿ ನಿರೊದ್ಯೋಗದ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಕಾಂಗ್ರೆಸ್ ನಾಯಕರು ಟೀಕೆ ಮಾಡಿದ್ದಾರೆ.
ಭಾರತದ ಸಂಪತ್ತಿನ ಶೇಕಡಾ 40 ರಷ್ಟು ಸಂಪತ್ತು ಕೇವಲ ಕೆಲವರ ಪಾಲಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು. ಇಂದು ಶೇಕಡಾ 84 ರಷ್ಟು ಭಾರತೀಯರ ಗಳಿಕೆ ಕಡಿಮೆಯಾಗುತ್ತಿದೆ ಮತ್ತು ಬಡತನಕ್ಕೆ ತಳ್ಳಲಾಗುತ್ತಿದೆ ಎಂದು ವಿಷಾಧಿಸಿದರು.
ಅಸಂಘಟಿತ ವಲಯ ಸಂಪೂರ್ಣ ನಾಶವಾಗಿರುವುದರಿಂದ ‘ಮೇಕ್ ಇನ್ ಇಂಡಿಯಾ’ ಸಾಧ್ಯವಿಲ್ಲ ಎಂದು ಅವರು ಆರೋಪಿಸಿದರು.