‘ಮೀಡಿಯಾ ಒನ್’ ಸುದ್ದಿವಾಹಿನಿಗೆ ಬೆಂಬಲ ಸೂಚಿಸಿದ ಕೇರಳ ಸಂಸದರು

Prasthutha|

ತಿರುವನಂತಪುರ: ಕೇರಳದ ಸಂಸದರ ನಿಯೋಗವೊಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿ ಮಲಯಾಳಮ್ ಪ್ರಮುಖ ಸುದ್ದಿ ವಾಹಿನಿಯಾದ ‘ಮೀಡಿಯಾ ಒನ್’ ಪ್ರಸಾರ ಲೈಸೆನ್ಸ್ ಅನ್ನು ವಜಾಗೊಳಿಸಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

- Advertisement -

ಸುದ್ದಿವಾಹಿನಿಯ ಭದ್ರತಾ ಕ್ಲಿಯರೆನ್ಸ್ ಅನ್ನು ರದ್ದುಗೊಳಿಸುವುದು ಗೃಹ ಸಚಿವಾಲಯದ ನಿರ್ದೇಶವಾದ್ದರಿಂದ ಈ ವಿಷಯಕ್ಕೂ ತಮ್ಮ ಸಚಿವಾಲಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕೇರಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಸುಧಾಕರ್, ಯಾವುದೇ ಸ್ಪಷ್ಟೀಕರಣ ನೀಡದೆ ಹಠಾತ್ ನಿಷೇಧವು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

‘ಮೀಡಿಯಾ ಒನ್’ ಸುದ್ದಿವಾಹಿನಿಗೆ ಬೆಂಬಲ ಸೂಚಿಸುವುದರಲ್ಲಿ ನಮಗೆ ಯಾವುದೇ ಹಿಂಜರಿಕೆಯಿಲ್ಲ. ಇದಕ್ಕಾಗಿಯೇ ಬ್ರಾಡ್ ಕ್ರಾಸ್ಟಿಂಗ್ ಸಚಿವಾಲಕ್ಕೆ ತೆರಳಿದ್ದೇವೆ. ಪ್ರಕರಣದ ವಿಚಾರಣೆಯು ನ್ಯಾಯಾಲಯದಲ್ಲಿ ನಡೆಯಲಿದೆ ಮತ್ತು ಕಾನೂನು ಹೋರಾಟದ ಮೂಲಕ ಸುದ್ದಿವಾಹಿನಿಯ ಕಾರ್ಯನಿರ್ವಹಣೆಯನ್ನು ಮುಂದುವರಿಸಲು ಬಯಸಿದ್ದೇವೆ ಎಂದು ಕೆ. ಸುಧಾಕರನ್ ತಿಳಿಸಿದರು.

ನ್ಯಾಯಾಲಯದ ಆದೇಶದ ಬಳಿಕ ವಾಹಿನಿಯು ತಾತ್ಕಲಿಕವಾಗಿ ಪ್ರಸಾರವನ್ನು ಪ್ರಾರಂಭಿಸಿದೆ.

ಈ ನಡುವೆ ಮೀಡಿಯಾ ಒನ್ ಚಾನೆಲ್ ಗೆ ಬೆಂಬಲ ಸೂಚಿಸಿ ಹಲವು ರಾಜಕೀಯ ಮುಖಂಡರು ಪ್ರತಿಕ್ರಿಯಿಸಿದ್ದಾರೆ.

ಕೇರಳ ಮೂಲದ ‘ಮೀಡಿಯಾ ಒನ್’ ಸುದ್ದಿವಾಹಿನಿಗೆ ಬೆಂಬಲ ಸೂಚಿಸಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆ.ಸೋಮ ಪ್ರಸಾದ್, ಜಾನ್ ಬ್ರಿಟಾಸ್, ರಮ್ಯಾ ಹರಿದಾಸ್, ಎಂ. ಕೆ. ರಾಘವನ್, ಅಬ್ದು ಸಮದ್ ಸಮದಾನಿ, ಆ್ಯಂಟೊ ಆ್ಯಂಟನಿ, ಎನ್.ಕೆ.ಪ್ರೇಮಚಂದ್ರನ್, ಬಿನೋಯ್ ವಿಶ್ವಂ, ಕೆ.ಸುಧಾಕರನ್, ಅಡೂರ್ ಪ್ರಕಾಶ್, ಇ.ಟಿ.ಮುಹಮ್ಮದ್ ಬಶೀರ್, ವಿ.ಕೆ.ಶ್ರೀಕಂದನ್, ರಾಜಮೋಹನ್ ಉನ್ನಿತಾನ್, ಬೆನ್ನಿ ಬೆಹ್ನಾನ್, ಹೈಬಿ ಈಡನ್, ಎಎಮ್ ಶೆರಿಫ್, ಡೀನ್ ಕುರ್ಯಕೋಸ್ ಮತ್ತು ಟಿಜಿ ಶಿವದಾಸನ್ ಸೇರಿದಂತೆ ಕೇರಳದ ಹತ್ತಾರು ಸಂಸದರು ಉಪಸ್ಥಿತರಿದ್ದರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ಸ್ಪೀಕರ್ ಎಂ.ಬಿ. ರಾಜೇಶ್, ಸಂಸದರು, ಶಾಸಕರು, ರಾಜಕೀಯ ಪಕ್ಷಗಳು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಪತ್ರಕರ್ತರು ಮಾಧ್ಯಮಗಳ ನಿಷೇಧವನ್ನು ಖಂಡಿಸಿದ್ದಾರೆ.

ಮಾರ್ಚ್ 2020 ರಲ್ಲಿ, ದೆಹಲಿ ಹತ್ಯಾಕಾಂಡದ ಕುರಿತು ವರದಿ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರವು ‘ಮೀಡಿಯಾ ಒನ್’ ಮೇಲೆ 48 ಗಂಟೆಗಳ ನಿಷೇಧ ಹೇರಿತ್ತು.



Join Whatsapp