ನವದೆಹಲಿ: ಹರಿದ್ವಾರ ಧರ್ಮ ಸಂಸತ್ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಇಬ್ಬರನ್ನು ಒಂದು ವಾರದೊಳಗೆ ಬಿಡುಗಡೆಗೊಳಿಸದಿದ್ದರೆ ಭಗತ್ ಸಿಂಗ್ ಮಾದರಿಯಲ್ಲಿ ವಿಧಾನಸಭೆಗೆ ಬಾಂಬ್ ದಾಳಿ ನಡೆಸುವುದಾಗಿ ಸಂಘಪರಿವಾರದ ನಾಯಕ, ಹರಿದ್ವಾರ ಧರ್ಮಸಂಸತ್ ಪ್ರಕರಣದ ಪ್ರಮುಖ ಆರೋಪಿ ಆನಂದ್ ಸ್ವರೂಪ್ ಮಹಾರಾಜ್ ಬೆದರಿಕೆ ಹಾಕಿದ್ದಾರೆ.
ಹರಿದ್ವಾರ ದ್ವೇಷ ಭಾಷಣ ಪ್ರಕರಣದಲ್ಲಿ ಜಿತೇಂದ್ರ ನಾರಾಯಣ್ ಸಿಂಗ್ ತ್ಯಾಗಿ ಅಲಿಯಾಸ್ ವಸೀಮ್ ರಿಝ್ವಿ ಯನ್ನು ಜನವರಿ 13 ರಂದು ಬಂಧಿಸಲಾಗಿತ್ತು. ಉತ್ತರಾಖಂಡ ಪೊಲೀಸರು ಜನವರಿ 15 ರಂದು ದಸ್ನಾ ದೇವಿಯ ಮುಖ್ಯ ಅರ್ಚಕ ಯತಿ ನರಸಿಂಗಾನಂದ ಅವರನ್ನು ಮಹಿಳೆಯರ ಬಗ್ಗೆ ಸ್ತ್ರೀದ್ವೇಷದ ಹೇಳಿಕೆ ಆರೋಪದಲ್ಲಿ ಬಂಧಿಸಿದ್ದರು. ಬಳಿಕ ಅವರ ಮೇಲೆ ದ್ವೇಷಭಾಷಣ ಪ್ರಕರಣ ದಾಖಲಿಸಲಾಗಿತ್ತು.
ಪ್ರಯಾಗ್ ರಾಜ್ ನಲ್ಲಿ ಭಾನುವಾರ ಆಯೋಜಿಸಲಾಗಿದ್ದ ಮತ್ತೊಂದು ಧರ್ಮ ಸಂಸದ್ ನಲ್ಲಿ, ವಾರಾಣಸಿ ಮೂಲದ ಸಂಘಟನೆ ಶಂಕರಾಚಾರ್ಯ ಪರಿಷತ್ ನ ಅಧ್ಯಕ್ಷರೂ ಆಗಿರುವ ಸ್ವರೂಪ್, ಧಾರ್ಮಿಕ ವ್ಯವಸ್ಥೆಯನ್ನು ಅಂಗೀಕರಿಸಲಾಗಿದೆ. ದೇಶವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಲಾಗಿದೆ ಎಂದು ಪ್ರಕಟಿಸಿದರು.
ಸಮುದಾಯವು ಮೂರು ಬೇಡಿಕೆಗಳನ್ನು ಹೊಂದಿದೆ, ಅವುಗಳನ್ನು ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಸರ್ಕಾರಕ್ಕೆ ತಲುಪಿಸಲಾಗುತ್ತಿದೆ ಎಂದು ಹೇಳಿದರು.
” ದೇಶದ ಇತಿಹಾಸವನ್ನು ದಾಖಲಿಸಲು 125 ಕೋಟಿ ಹಿಂದೂಗಳಿಗೆ ಆದೇಶ ನೀಡಲಾಗಿದೆ. ಪ್ರತಿಭಟನೆಯನ್ನು ವ್ಯಾಪಕಗೊಳಿಸುವುದು ಮತ್ತು ಸರ್ಕಾರದ ಮೇಲೆ ಒತ್ತಡ ಹೇರುವುದು ಅತ್ಯಗತ್ಯ. ಸಾರ್ವಜನಿಕರ ಬೇಡಿಕೆಗೆ ಸರ್ಕಾರ ಅಂತಿಮವಾಗಿ ತಲೆಬಾಗುತ್ತದೆ” ಎಂದು ಸ್ವರೂಪ್ ಹೇಳಿದ್ದಾರೆ.
ಧರ್ಮ ಸಂಸತ್ ನ ಮೂರು ಬೇಡಿಕೆಗಳನ್ನು ಪ್ರಸ್ತಾಪಿಸಿದ ಅವರು, ಅದರಲ್ಲಿ ಮೊದಲನೆಯದು, ದೇಶವನ್ನು ಹಿಂದೂ ರಾಷ್ಟ್ರಎಂದು ಘೋಷಿಸುವುದಾಗಿದೆ ಎಂದರು.
“ಭಾರತವನ್ನು ಜಾತ್ಯತೀತ ರಾಷ್ಟ್ರ ಎಂದು ಕರೆಯುವ ಮೂಲಕ ‘ಸಾಂವಿಧಾನಿಕ ತಪ್ಪು’ ಮಾಡಲಾಗಿದೆ. ಇದನ್ನು ಸರಿಪಡಿಸಿ ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು. ಮತಾಂತರಗೊಂಡವರಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಮೂಲಕ ಮತಾಂತರ ವಿರೋಧಿ ಕಾನೂನನ್ನು ಬಲಪಡಿಸಲು ಪ್ರಧಾನಿಗೆ ನಿರ್ದೇಶನ ನೀಡಲಾಗಿದೆ. ಮತ್ತು ಕೊನೆಯದಾಗಿ, ಬಂಧನಕ್ಕೊಳಗಾದ ನಮ್ಮ ಇಬ್ಬರು ಧಾರ್ಮಿಕ ಯೋಧರನ್ನು ಬಿಡುಗಡೆ ಮಾಡಲು ನಾವು ಒತ್ತಾಯಿಸುತ್ತೇವೆ ಎಂದು ಆನಂದ್ ಸ್ವರೂಪ್ ಹೇಳಿದ್ದಾರೆ.
“ನಮ್ಮ ಯೋಧರನ್ನು ಒಂದು ವಾರದ ಅವಧಿಯಲ್ಲಿ ಬಿಡುಗಡೆ ಮಾಡದಿದ್ದರೆ, ಭೀಕರ ಪರಿಣಾಮಗಳನ್ನು ಎದುರಿಸಲು ಸರ್ಕಾರ ಸಿದ್ಧವಾಗಬೇಕು. ವಿಧಾನಸಭೆಯ ಮೇಲೆ ಭಗತ್ ಸಿಂಗ್ ಬಾಂಬ್ ದಾಳಿ ಮಾಡಿದ ಘಟನೆ ಮರುಕಳಿಸುವ ಸಾಧ್ಯತೆ ಇದೆ” ಎಂದು ಸ್ವರೂಪ್ ಮುಗುಳು ನಗುತ್ತಾ ಬೆದರಿಕೆ ಹಾಕಿದ್ದಾರೆ.
ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಮತ್ತು ಅವರ ಟ್ರೇಡ್ ಡಿಸ್ ಪ್ಯೂಟ್ ಬಿಲ್ ವಿರುದ್ಧ ಪ್ರತಿಭಟಿಸಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್ ಮತ್ತು ಬಿ.ಕೆ.ದತ್ ಅವರು 1929ರ ಎಪ್ರಿಲ್ 8ರಂದು ದೆಹಲಿಯ ಕೇಂದ್ರ ವಿಧಾನಸಭೆಯ ಮೇಲೆ ಬಾಂಬ್ ಎಸೆದ ಕೇಂದ್ರ ಅಸೆಂಬ್ಲಿ ಬಾಂಬ್ ಸ್ಫೋಟ ಪ್ರಕರಣವನ್ನು ಉಲ್ಲೇಖಿಸಿ ಸ್ವರೂಪ್ ಈ ಬೆದರಿಕೆ ಹಾಕಿದ್ದಾರೆ.
ಡಿಸೆಂಬರ್ 17-19 ರ ನಡುವೆ ಮೂರು ದಿನಗಳ ಧರ್ಮ ಸಂಸತ್ ನಂತರ, ಕಳೆದ ವರ್ಷದಿಂದ ದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹೆಚ್ಚುತ್ತಿದೆ. ಅಲ್ಲಿ ವಿವಿಧ ಹಿಂದುತ್ವ ನಾಯಕರು ‘ಶಾಸ್ತ್ರ ಮೇವ ಜಯತೇ’ ಘೋಷಣೆಯೊಂದಿಗೆ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಬಹಿರಂಗವಾಗಿ ದ್ವೇಷವನ್ನು ಹೊರಹಾಕಿದ್ದಾರೆ.
ದ್ವೇಷದ ಭಾಷಣದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಹಿಂದುತ್ವ ನಾಯಕರ ವಿರುದ್ಧ ಪೊಲೀಸರಲ್ಲಿ ದೂರುಗಳು ದಾಖಲಾದವು. ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ಒಂದು ತಿಂಗಳ ನಂತರವಷ್ಟೇ ಆರೋಪಿಗಳಲ್ಲಿ ಕೆಲವರನ್ನು ಬಂಧಿಸಲಾಗಿದೆ.