ಕಾಂಗ್ರೆಸ್’ನಲ್ಲಿ ಮುಸ್ಲಿಮರಿಗೆ ಅನ್ಯಾಯ, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ; ಜಮೀಯತುಲ್ ಉಲಮಾ‌ ಹಿಂದ್ ಎಚ್ಚರಿಕೆ

Prasthutha|

ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನ ಮುಸ್ಲಿಮ್ ನಾಯಕರ ಕೈಪ್ಪಿದ ಹಿನ್ನೆಲೆಯಲ್ಲಿ ಮುಸ್ಲಿಂ ಧರ್ಮಗುರುಗಳ ಒಂದು ವಿಭಾಗವು ಸಿಡಿದೆದ್ದಿದ್ದು, ಮುಂದಿನ‌ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

- Advertisement -

ಬೆಂಗಳೂರಿನ ನಂದಿದುರ್ಗಾ ರಸ್ತೆಯಲ್ಲಿರುವ ಖಾದ್ರಿ ಮಸೀದಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಮೀಯತುಲ್ ಉಲಮಾ ಹಿಂದ್ ರಾಜ್ಯಾಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ರಾಜಕೀಯದಲ್ಲಿ ಮುಸ್ಲಿಂ ನಾಯಕರಿಗೆ ಕಾಂಗ್ರೆಸ್ ಅರ್ಹ ಪ್ರಾತಿನಿಧ್ಯ ನೀಡುತ್ತಿಲ್ಲ. ರಾಜಕೀಯ ಕ್ಷೇತ್ರದಲ್ಲಿ ಪದೇ ಪದೇ ಮುಸ್ಲಿಮ್ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕನ ಸ್ಥಾನ ಮುಸ್ಲಿಮ್ ಸಮುದಾಯಕ್ಕೆ ಮೀಸಲಿಡಬೇಕಿತ್ತು. ಕಾಂಗ್ರೆಸ್ ಈ ರೀತಿಯಲ್ಲಿ ತಪ್ಪು ತೀರ್ಮಾನಗಳನ್ನು ತೆಗೆದುಕೊಳ್ಳುವುದನ್ನು ಮುಂದುವರೆಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಜಾತ್ಯತೀತ ನಿಲುವು, ಸಿದ್ಧಾಂತಗಳಿಗೆ ಮುಸ್ಲಿಮ್ ಸಮುದಾಯ ಬೆಂಬಲಿಸಿ, ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಜೊತೆಗೆ ನಿಂತಿದೆ. ಆದರೆ, ಈ ಪಕ್ಷದ ಹಿರಿಯ ನಾಯಕರು, ಎಐಸಿಸಿ ನಾಯಕರು ಮುಸ್ಲಿಮ್ ಸಮುದಾಯದ ನಾಯಕರನ್ನು ಪರಿಗಣಿಸುತ್ತಿಲ್ಲ.ಹಲವು ವರ್ಷಗಳಿಂದ ಈ ಪಕ್ಷಕ್ಕಾಗಿ ದುಡಿದರೂ, ಅವರನ್ನು ನಿರ್ಲಕ್ಷ್ಯ ಮಾಡಿಕೊಂಡು ಬರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

- Advertisement -

ನಾಸಿಹ್ ಫೌಂಡೇಶನ್ ಅಧ್ಯಕ್ಷ ಮೌಲಾನ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ ಮಾತನಾಡಿ, ಕಾಂಗ್ರೆಸ್ ಪಕ್ಷವೂ ಅಲ್ಪಸಂಖ್ಯಾತರಿಗೆ ಸೂಕ್ತ ಸ್ಥಾನ ನೀಡಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಪಕ್ಷಕ್ಕೆ ಪಾಠ ಕಲಿಸಬೇಕಾಗುತ್ತದೆ. ಈ ಸಂಬಂಧ ಚರ್ಚಿಸಲು ರಾಜ್ಯಮಟ್ಟದ ಸಭೆವೊಂದನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಜಮಾತೆ ಅಹ್ಲೆ ಸುನ್ನತ್ ಕರ್ನಾಟಕ ಅಧ್ಯಕ್ಷ ಮೌಲಾನ ಸೈಯದ್ ತನ್ವೀರ್ ಪೀರಾ ಹಾಶ್ಮಿ ಮಾತನಾಡಿ, ಮುಸಿಮ್ ಸಮುದಾಯದ ವಿಚಾರದಲ್ಲಿ ಕಾಂಗ್ರೆಸ್ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕರ್ನಾಟಕದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಸುಮಾರು ಒಂದು ಕೋಟಿಗೂ ಹೆಚ್ಚು ಜನರಿದ್ದಾರೆ. ಆದರೂ ನಮ್ಮ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ಮಾಜಿ ರಾಜ್ಯಾಧ್ಯಕ್ಷ ಮೌಲಾನ ಏಜಾಝ್ ಅಹ್ಮದ್ ನದ್ವಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು



Join Whatsapp