ದೆಹಲಿ : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವಿರುದ್ಧ ದುರುದ್ದೇಶದಿಂದ ಕೂಡಿದ ಮಾನಹಾನಿಕರ ವರದಿ ಪ್ರಕಟಿಸಿದ್ದ ‘ಟೈಮ್ ನೌ’ ಚಾನೆಲಿಗೆ ದೆಹಲಿ ಆಗ್ನೇಯ ಸಾಕೇತ್ ಕೋರ್ಟ್ ನ್ಯಾಯಾಧೀಶ ಚಿತ್ರಾಂಶಿ ಆರೋರ ನೋಟೀಸ್ ಜಾರಿ ಮಾಡಿದ್ದಾರೆ. ಈ ಕುರಿತಾಗಿನ ವಿಚಾರಣೆಯನ್ನು ಮುಂದಿನ ಮಾರ್ಚ್ ಮೂರಕ್ಕೆ ನಿಗದಿಪಡಿಸಿದೆ.
ಕಳೆದ ನವಂಬರ್ ನಲ್ಲಿ ‘ಟೈಮ್ಸ್ ನೌ’ ತನ್ನ ವೆಬ್ ಸೈಟ್ ಸುದ್ದಿಯಲ್ಲಿ ಕೇರಳದಲ್ಲಿ ನಡೆದಿದ್ದ ಆರೆಸ್ಸೆಸ್ ಕಾರ್ಯಕರ್ತ ಸಂಜಿತ್ ಕೊಲೆ ಪ್ರಕರಣದಲ್ಲಿ ಪೊಲೀಸರು PFI ಕಾರ್ಯಕಾರಿ ಸದಸ್ಯನನ್ನು ಬಂಧಿಸಿದ್ದಾರೆ ಎಂದು ವರದಿ ಮಾಡಿತ್ತು. ಮಾತ್ರವಲ್ಲ ಚಾನೆಲಿನ ಆಂಕರ್ ಕೂಡಾ PFI ಕಾರ್ಯಕರ್ತನನ್ನು ಬಂಧಿಸಿದ್ದಾರೆಂದು ಸುದ್ದಿ ವಾಚಿಸಿದ್ದ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ಈ ವೆಬ್ ಸೈಟ್ ಸುದ್ದಿ ಮತ್ತು ಟಿವಿ ಸುದ್ದಿಗಳ ಪ್ರಸಾರವು ಜನರನ್ನು ಪ್ರಚೋದಿಸುವ ಉದ್ದೇಶದಿಂದ, PFI ವಿರುದ್ಧ ಸುಳ್ಳು ಮತ್ತು ಕ್ಷುಲ್ಲಕ ಆರೋಪಗಳನ್ನು ಹೊರಿಸಿ, ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಸಂಘಟನೆಯ ಹೆಸರು, ಸದ್ಭಾವನೆ ಮತ್ತು ವರ್ಚಸ್ಸಿಗೆ ಕಳಂಕ ಉಂಟು ಮಾಡುವ ದುರುದ್ದೇಶ ಹೊಂದಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಸುದ್ದಿಯಲ್ಲಿ ಪ್ರಸಾರವಾದಂತೆ ಬಂಧಿತರಿಗೆ PFI ಸಂಘಟನೆಯೊಂದಿಗೆ ಯಾವುದೇ ರೀತಿಯ ಸಂಬಂಧಗಳಿಲ್ಲ. ಬಂಧಿತರು ಸಂಘಟನೆಯ ಯಾವುದೇ ಹುದ್ದೆಗಳನ್ನು ಅಲಂಕರಿಸಿಲ್ಲ ಎಂದು ಸಂಘಟನೆಯು ನ್ಯಾಯಾಲಯಕ್ಕೆ ಹೇಳಿದೆ. ಕೇರಳ ಪೊಲೀಸರು ಕೂಡಾ “ನಾವು ಪ್ರತ್ಯಕ್ಷ ಸಾಕ್ಷಿಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿದ್ದೇವೆ. ಆದರೆ ಈಗಲೇ ಬಂಧಿತರ ಕುರಿತು ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಅದು ತನಿಖೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ” ಎಂದು ಹೇಳಿದ್ದರು. ಎಲ್ಲಿಯೂ ಅವರು ಬಂಧಿತರು PFI ಸಂಘಟನೆಯ ಸದಸ್ಯರು ಎಂದು ಉಲ್ಲೇಖಿಸಿಲ್ಲ ಎನ್ನುವುದನ್ನು ಅರ್ಜಿಯಲ್ಲಿ ಕೋರ್ಟ್ ಗೆ ಮನವರಿಕೆ ಮಾಡಲಾಗಿತ್ತು.
ಹೀಗಿರುವಾಗ ‘ಟೈಮ್ಸ್ ನೌ’ ಚಾನೆಲ್, PFI ಸಂಘಟನೆಯ ಮೇಲಿನ ದ್ವೇಷದಿಂದ, ಪೂರ್ವಾಗ್ರಹಪೀಡಿತರಾಗಿ ಸುಳು ಮತ್ತು ಕಟ್ಟು ಕಥೆಗಳನ್ನು ಸೃಷ್ಟಿಸಿ ಸುದ್ದಿ ಮಾಡಿದೆ. ಈ ಸುದ್ದಿ ಪ್ರಸಾರವು ಸಂಘಟನೆಯ ಹೆಸರಿಗೆ ಮಸಿ ಬಳಿಯುವ ಪ್ರಯತ್ನದಿಂದ ಕೂಡಿತ್ತು ಎಂದು ತಿಳಿಸಿದ್ದರು. ಆದುದರಿಂದ PFI ಸಂಘಟನೆ ಒಂದು ಲಕ್ಷ ಮಾನನಷ್ಟ ಪರಿಹಾರ ಕೋರಿತ್ತು. ‘ಟೈಮ್ಸ್ ನೌ’ ತಾಣವು ನಮ್ಮ ಸಂಘಟನೆಯ ಹೆಸರಿಗೆ ಕಳಂಕ ತರುವ ಅಥವಾ ಮಾನಹಾನಿ ಮಾಡುವ ಯಾವುದೇ ಸುದ್ದಿಯನ್ನು ಪ್ರಕಟಿಸದಂತೆ ಅಥವಾ ಪ್ರಸಾರ ಮಾಡದಂತೆ ಶಾಶ್ವತ ನಿರ್ಬಂಧವನ್ನು ಹೇರುವಂತೆ ಅರ್ಜಿಯಲ್ಲಿ ಕೇಳಲಾಗಿತ್ತು. ಕಟ್ಟು ಕಥೆಗಳುಳ್ಳ ಸುದ್ದಿಯನ್ನು ಸೈಟಿನಿಂದ ತೆಗೆದು ಹಾಕುವಂತೆಯೂ ಕೋರಲಾಗಿತ್ತು. ವಕೀಲ ಶಕೀಲ್ ಅಬ್ಬಾಸ್ PFI ಪರ ವಾದಿಸಿದ್ದರು.