ಇಳಕಲ್ ಪೊಲೀಸರ‌ ಪಕ್ಷಪಾತಿ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಖಂಡನೆ

Prasthutha|

- Advertisement -

ಬಾಗಲಕೋಟೆ: ಪ್ರಚೋದನಾಕಾರಿ ಭಾಷಣದ ವಿಚಾರದಲ್ಲಿ ಘಟನೆಗೆ ಸಂಬಂಧ ಪಡದ ಸ್ಥಳೀಯ ಮುಸ್ಲಿಮ್ ನಾಯಕರನ್ನು ಬಂಧಿಸುತ್ತಿರುವ ಇಳಕಲ್ ಪೊಲೀಸರ ಪಕ್ಷಪಾತಿ  ಕ್ರಮವನ್ನು ಪಾಪ್ಯುಲರ್ ಫ್ರಂಟ್  ಆಫ್ ಇಂಡಿಯಾ ಬಾಗಲಕೋಟೆ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ಪಾಪ್ಯುಲರ್ ಫ್ರಂಟ್ ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಅಸ್ಗರ್ ಅಲಿ ಶೇಕ, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್ ನಲ್ಲಿ ಮೌಲಾನಾ ಆಝಾದ್ ವೃತ್ತದ ಉದ್ಘಾಟನಾ ಕಾರ್ಯಕ್ರಮವನ್ನು ಜನವರಿ 14ರಂದು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಯಾಗಿ ಎಐಎಂಐಎಂ ರಾಜ್ಯಾಧ್ಯಕ್ಷರಾದ ಉಸ್ಮಾನ್ ಘನಿ ಹುಮ್ನಾಬಾದ್ ಅವರನ್ನು ಆಹ್ವಾನಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉಸ್ಮಾನ್ ಘನಿ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿ ಈ ವೀಡಿಯೋ ವೈರಲ್ ಆದ ಬಳಿಕ ಪೊಲೀಸರು ಜನವರಿ 15ರಂದು ಉಸ್ಮಾನ್ ಘನಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇದಾದ ಬಳಿಕ ಉಸ್ಮಾನ್ ಘನಿ ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.ಈ ಮಧ್ಯೆ ಪೊಲೀಸರು ಕಾನೂನುಬಾಹಿರವಾಗಿ ಅಮಾಯಕರ ಬೇಟೆಗೆ ಇಳಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

 ಉಸ್ಮಾನ್ ಘನಿಯವರನ್ನು ಬಂಧಿಸಲು ವಿಫಲವಾದ ಪೊಲೀಸರು ಅಮಾಯಕರನ್ನು ರಾತ್ರೋ ರಾತ್ರಿ ವಶಕ್ಕೆ ಪಡೆದು ಠಾಣೆಯಲ್ಲಿ ಚಿತ್ರಹಿಂಸೆ ನೀಡಿದ್ದಾರೆ. ಉಸ್ಮಾನ್ ಘನಿ ಅವರ ಪತ್ನಿ, ಪುತ್ರಿಯನ್ನು ಕೂಡ ಠಾಣೆಗೆ ಎಳೆದೊಯ್ದು ದೌರ್ಜನ್ಯವೆಸಗಲಾಗಿದೆ. ಇದನ್ನು ಖಂಡಿಸಿ ಸ್ಥಳೀಯರು ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆಗೆ ಮುಂದಾದ ಬಳಿಕ ವಶಕ್ಕೆ ಪಡೆದವರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದಾದ ಬಳಿಕ ಸಂಘಪರಿವಾರದಿಂದ ಒತ್ತಡ ಹೆಚ್ಚಾದಾಗ ಇಳಕಲ್ ಟೌನ್ ಪೊಲೀಸರು ಸ್ಥಳೀಯ ನಿವಾಸಿಗಳಾದ ಮುಹಮ್ಮದ್ ರಫೀಕ್ ಐವಳ್ಳಿ, ಅಲ್ತಾಫ್ ಹುಸೇನ್ ಕರಡಿ, ಮುಹಮ್ಮದ್ ಯೂಸುಫ್ ಭಾಗವಾನ್ ಸೇರಿದಂತೆ ನಾಲ್ವರು ಅಮಾಯಕರನ್ನು ಜನವರಿ 25ರಂದು ರಾತ್ರಿ ಮನೆಗೆ ನುಗ್ಗಿ ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ. ವಿಚಾರಣೆ ನಡೆಸಿ ಬಿಡುವುದಾಗಿ ಹೇಳಿದ್ದ ಪೊಲೀಸರು ಜನವರಿ 27ರವರೆಗೆ ಪೊಲೀಸ್ ಠಾಣೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿ ದೌರ್ಜನ್ಯವೆಸಗಿದ್ದಾರೆ ಎಂದು ಅಸ್ಗರ್ ಅಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಟುಂಬದ ಸದಸ್ಯರ ಭೇಟಿಗೂ ಅವಕಾಶ ನಿರಾಕರಿಸಿದ ಪೊಲೀಸರು ಊಟ, ತಿಂಡಿ ನೀಡದೆ ಚಿತ್ರಹಿಂಸೆ ನೀಡಿದ್ದಾರೆ. ಪ್ರಚೋದನಾಕಾರಿ ಭಾಷಣ ಮಾಡಿದವರಿಗೂ ಇವರಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಸಂಘಪರಿವಾರದ  ಒತ್ತಡಕ್ಕೆ ಮಣಿದು ಪೊಲೀಸರು ಈ ಕಾನೂನುಬಾಹಿರ ಕೃತ್ಯವೆಸಗಿದ್ದಾರೆ. ಕೊನೆಗೆ ಈ ನಾಲ್ವರ ವಿರುದ್ಧವೂ ಸುಳ್ಳು ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪ್ರಚೋದನಾಕಾರಿ ಭಾಷಣ ಮಾಡಿರುವುದು ನಿಜವಾದರೆ ತಪ್ಪಿತಸ್ಥರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕೇ ಹೊರತು ಘಟನೆಗೆ ಸಂಬಂಧಪಡದವರ ವಿರುದ್ಧ ಪೌರುಷ ತೋರಿಸಿರುವುದು ಅಕ್ಷಮ್ಯ ಎಂದು ಅವರು ಹೇಳಿದ್ದಾರೆ.

ಕಾನೂನು ಪ್ರಕಾರ ನಡೆದುಕೊಳ್ಳಬೇಕಾದ ಪೊಲೀಸರು ಕಾನೂನನ್ನು ಗಾಳಿಗೆ ತೂರಿ ಮೂರು ದಿನಗಳ ಕಾಲ ಅಮಾಯಕರನ್ನು ಠಾಣೆಯಲ್ಲಿ ಕೂರಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ತಪ್ಪಿತಸ್ಥ ಇಳಕಲ್ ಟೌನ್ ಪೊಲೀಸರನ್ನು ಅಮಾನತುಗೊಳಿಸಿ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸುಳ್ಳು ಪ್ರಕರಣದಡಿ ಬಂಧಿಸಿರುವ ಅಮಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇನ್ನು ಮುಂದೆ ಇಳಕಲ್ ನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕ್ರಮವಹಿಸಬೇಕೆಂದು ಅಸ್ಗರ್ ಅಲಿ ಶೇಕ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪಾಪ್ಯುಲರ್ ಫ್ರಂಟ್ ಬಾಗಲಕೋಟೆ ಜಿಲ್ಲಾ ಸಮಿತಿ ಸದಸ್ಯರಾದ ಸಲೀಂ ಅವಟಿ, ಇಮ್ತಿಯಾಜ್ ಜಮಾದಾರ ಉಪಸ್ಥಿತರಿದ್ದರು.

Join Whatsapp