ಕೊಲ್ಲಂ: ಕೇರಳದಲ್ಲಿ ಒಂದೇ ದಿನ ಪ್ರತ್ಯೇಕವಾಗಿ ನಡೆದ ಮೂರು ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ವಿದ್ಯಾರ್ಥಿಗಳು ಸೇರಿದಂತೆ 16 ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ನಿರ್ಲ್ಯಕ್ಷ್ಯದ ಚಾಲನೆಗೆ ಮಿನಿ ಟ್ರಕ್ ಚಾಲಕ ಬಲಿ
ಖಾಸಗಿ ಬಸ್ ಚಾಲಕನ ಅತೀವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಮಿನಿ ಟ್ರಕ್ ಚಾಲಕ ಸಾವನ್ನಪ್ಪಿರುವ ಘಟನೆ ಕೊಲ್ಲಂ ಜಿಲ್ಲೆಯ ಶಕ್ತಿಕುಳಂಗರದ ಮರಿಯಾಲಂ ಜಂಕ್ಷನ್’ನಲ್ಲಿ ನಡೆದಿದೆ.
ಕಾರೊಂದನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಮಿನಿ ಟ್ರಕ್’ಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು, ಮಿನಿ ಟ್ರಕ್ ಚಾಲಕ ಎಲೂರ್ ನಿವಾಸಿ ಪುಷ್ಪನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಬಸ್ ನಲ್ಲಿದ್ದ 16ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.
ಅಪಘಾತದ ದೃಶ್ಯ ಸಮೀಪದ CCTVಯಲ್ಲಿ ಸೆರೆಯಾಗಿದ್ದು, ಬಸ್ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿರುವುದು ದೃಢಪಟ್ಟಿದೆ.
300 ಅಡಿ ಕಂದಕಕ್ಕೆ ಉರುಳಿದ ಲಾರಿ, ಚಾಲಕ-ಕ್ಲೀನರ್ ಸ್ಥಳದಲ್ಲೇ ಸಾವು
ಕೊಚ್ಚಿ-ಧನುಷ್ಕೋಡಿ ರಾಷ್ಟ್ರೀಯ ಹೆದ್ದಾರಿಯ ವಲಾರ ಜಲಪಾತದ ಬಳಿ ಲಾರಿಯೊಂದು 300 ಅಡಿ ಆಳಕ್ಕೆ ಉರುಳಿಬಿದ್ದ ಪರಿಣಾಮ ಚಾಲಕ ಸಿಜಿ ಹಾಗೂ ಕ್ಲೀನರ್ ಸಂತೋಷ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸೋಮವಾರ ರಾತ್ರಿ ಅವಘಡ ನಡೆದಿದ್ದು, ಮಂಗಳವಾರ ಬೆಳಗ್ಗೆ ಮೃತದೇಹಗಳನ್ನು ಮೇಲಕ್ಕೆ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಾರಿ-ಬೈಕ್ ಅಪಘಾತ- ಯುವಕ ಸಾವು
ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯೊಂದು ಬೈಕ್’ಗೆ ಡಿಕ್ಕಿಯಾದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಇಡುಕ್ಕಿ ಜಿಲ್ಲೆಯ ನಿನ್ಮಲರಮ್ ಎಂಬಲ್ಲಿ ನಡೆದಿದೆ.
ಕೆಲಸಕ್ಕೆ ತೆರಳಿತ್ತಿದ್ದ ಅನಂತು [21] ಸಂಚರಿಸುತ್ತಿದ್ದ ಬೈಕ್’ಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಪ್ರಳಯದಲ್ಲಿ ಬದುಕುಳಿದಿದ್ದ ಅನಂತು !
ಕಳೆದ ಅಕ್ಟೋಬರ್ ನಲ್ಲಿ ಮನೆಯಲ್ಲಿದ್ದ ವೇಳೆ ಭಾರಿ ಭೂ ಕುಸಿತದ ಸಂಭವಿಸಿದರೂ ಅನಂತು ಹಾಗೂ ಕುಟುಂಬದವರು ಪವಾಡಸದೃಶ್ಯವಾಗಿ ಪಾರಾಗಿದ್ದರು. ಆದರೆ ಮೂರು ತಿಂಗಳು ಕಳೆಯುವಷ್ಟರಲ್ಲಿಯೇ ಅನಂತು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ.