ಬೆಂಗಳೂರು: ಚಿನ್ನಾಭರಣಗಳನ್ನು ದೋಚಲು ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ ನಾಟಿ ವೈದ್ಯನನ್ನು ಬಂಧಿಸುವಲ್ಲಿ ಯಲಹಂಕ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಟ್ಟಿಗೇನಹಳ್ಳಿಯ ಸಿದ್ದಮ್ಮ(55) ಎಂಬವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ನಾಟಿ ವೈದ್ಯ ಸಲೀಂ ಎಂಬಾತನನ್ನು ಬಿಹಾರದಲ್ಲಿ ಬಂಧಿಸಲಾಗಿದೆ ಎಂದು ಡಿಸಿಪಿ ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.
ಕಟ್ಟಿಗೇನಹಳ್ಳಿ ಬಳಿ ಕಳೆದ 20 ವರ್ಷಗಳಿಂದ ಆರೋಪಿ ಸಲೀಂ ತನ್ನ ಮನೆಯಲ್ಲೇ ನಾಟಿ ಔಷಧ ಕೊಡುತ್ತಿದ್ದು ಅನಾರೋಗ್ಯದ ಸಂಬಂಧ ಆಗಾಗ ಸಿದ್ದಮ್ಮ ಆತನ ಮನೆಗೆ ಹೋಗುತ್ತಿದ್ದರು.
ಅದರಂತೆ ಕಳೆದ ಜ.20ರಂದು ಸಲೀಂ ಮನೆಗೆ ತೆರಳಿದ್ದ ಸಿದ್ದಮ್ಮಳನ್ನು ಕೊಲೆ ಮಾಡಿ ಆಕೆಯ ಕುತ್ತಿಗೆ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿ ಪರಾರಿಯಾಗಿದ್ದು ಈ ಸಂಬಂಧ ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಆರೋಪಿಯು ಬಿಹಾರದ ಪಾಟ್ನಾದಲ್ಲಿ ಇರುವ ಮಾಹಿತಿ ಲಭಿಸಿದೆ. ತಕ್ಷಣ ಅಲ್ಲಿಗೆ ತೆರಳಿದ ಯಲಹಂಕ ಪೊಲೀಸರ ತಂಡ ಕಾರ್ಯಾಚರಣೆ ಕೈಗೊಂಡು ಬಂಧಿಸಿದ್ದಾರೆ.