ಅಪಸ್ಮಾರ ಕಾಯಿಲೆ ಲಕ್ಷಣ ಹೊಂದಿದ್ದ ಮೃತ ಸವಿತಾ
ಮಂಗಳೂರು: ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷಕ್ಕೆ ಗರ್ಭಿಣಿ ಮಹಿಳೆ, ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫಾದರ್ ಮುಲ್ಲರ್ ಆಸ್ಪತ್ರೆ ಸ್ಪಷ್ಟನೆ ನೀಡಿದ್ದು, ಅಪಸ್ಮಾರ ಕಾಯಿಲೆಯ ಲಕ್ಷಣ ಹೊಂದಿದ್ದ ಗರ್ಭಿಣಿ ಸವಿತಾ ಎಂಬಾಕೆಯನ್ನು ಈ ಹಿಂದೆ ಚಿಕಿತ್ಸೆಗಾಗಿ ವಿಟ್ಲ ಆಸ್ಪತ್ರೆಯೊಂದಕ್ಕೆ ತೆರಳಿದ್ದರು.
ಈ ವೇಳೆ ಉನ್ನತ ತುರ್ತು ಚಿಕಿತ್ಸೆಯ ಅಗತ್ಯವಿದ್ದ ಕಾರಣ ಫಾದರ್ ಮುಲ್ಲರ್ ಆಸ್ಪತ್ರೆ ದಾಖಲಿಸಲಾಗಿತ್ತು. ಇಲ್ಲಿಗೆ ಬಂದ ಸಂದರ್ಭದಲ್ಲೇ ಆಕೆಯ ಆರೋಗ್ಯ ಸಮಸ್ಯೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ಪರೀಕ್ಷಿಸಿದ ವೈದ್ಯರು ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಆರಂಭಿಸಿದರು. ಆಕೆಯ ಆರೋಗ್ಯ ಸ್ಥಿತಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಬರುವ ಮುಂಚೆಯೇ ಹದಗೆಟ್ಟ ಕಾರಣ ನಮ್ಮ ಎಲ್ಲಾ ಪ್ರಯತ್ನಗಳ ನಡುವೆಯೂ ಮೃತಪಟ್ಟಿದಾಳೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿಯು ಸ್ಪಷ್ಟಪಡಿಸಿದೆ.
ಮಾತ್ರವಲ್ಲ ಮಹಿಳೆಯ ಹೊಟ್ಟೆಯಲ್ಲಿದ್ದ ಶಿಶು ಮೃತಪಟ್ಟ ಸ್ಥಿತಿಯಲ್ಲೇ ನಮ್ಮ ಆಸ್ಪತ್ರೆಗೆ ತರಲಾಗಿತ್ತು. ನಮ್ಮ ಎಲ್ಲಾ ವಿಧದ ತ್ವರಿತ, ಉನ್ನತ ಮಟ್ಟದ ಚಿಕಿತ್ಸೆಗಳ ಹೊರತಾಗಿಯೂ ಮೃತಪಟ್ಟಿರುವುದು ದುರದೃಷ್ಟಕರ ಮತ್ತು ನೋವಿನ ಸಂಗತಿ ಎಂದು ತಿಳಿಸಿದೆ.
ಇದನ್ನೇ ನೆಪವಾಗಿಟ್ಟು ವೈದ್ಯರ ನಿರ್ಲಕ್ಷ ಎಂಬ ಹಣೆಪಟ್ಟಿ ಕಟ್ಟಿ ವೈದ್ಯರನ್ನು ಮತ್ತು ಆಸ್ಪತ್ರೆಯನ್ನು ದೂರಲಾಗುತ್ತಿದೆ. ರೋಗಿ ಆಸ್ಪತ್ರೆಗೆ ಬರುವಾಗಲೇ ಸಂದಿಗ್ನ ಪರಿಸ್ಥಿತಿಯಲ್ಲಿದ್ದು, ಕಾಲ ಮೀರಿ ಹೋಗಿದೆ. ಈ ಸಂದರ್ಭದಲ್ಲಿ ಕರ್ತವ್ಯ ನಿರತ ವೈದ್ಯರು ಆಧುನಿಕ ಚಿಕಿತ್ಸಾ ವಿಧಾನಗಳನ್ನು ಬಳಸಿ ತುರ್ತು ಮತ್ತು ತೀವ್ರ ನಿಗಾ ಚಿಕಿತ್ಸೆ ನೀಡಿದ್ದಾರೆ.
ಫಾದರ್ ಮುಲ್ಲರ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯು ರೋಗಿಗಳಿಗೆ ಉತ್ತಮ ಹಾಗೂ ಸಾಧ್ಯವಿರುವ ಚಿಕಿತ್ಸೆ ಮತ್ತು ಆರೋಗ್ಯ ಸೇವೆಗಳನ್ನು ನೀಡಲು ಎಂದಿಗೂ ಬದ್ಧವಾಗಿದೆ ಎಂದು ಆಡಳಿತ ಮಂಡಳಿ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.