ಐಎಎಸ್ ಕೇಡರ್ ನಿಯಮ ಬದಲಾವಣೆಗೆ ಕೇಂದ್ರದ ಚಿಂತನೆ: ರಾಜ್ಯಗಳ ತೀವ್ರ ವಿರೋಧ

Prasthutha|

ನವದೆಹಲಿ: ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ನಿಯೋಜಿಸುವ ನಿಯಮಗಳಿಗೆ ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ನಡೆಗೆ ರಾಜ್ಯ ಸರ್ಕಾರಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -


ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಕೇಂದ್ರದ ಡೆಪ್ಯುಟೇಶನ್ ಮೂಲಕ ವರ್ಗಾವಣೆ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರವು ತನ್ನಲ್ಲೇ ಉಳಿಸಿಕೊಳ್ಳಲು ಚಿಂತನೆ ನಡೆಸುತ್ತಿದೆ. ಈಗಿರುವ ರಾಜ್ಯ ಸರ್ಕಾರಗಳ ಅನುಮೋದನೆಯನ್ನು ಕಡ್ಡಾಯವಾಗಿ ಪಡೆಯಬೇಕು ಎಂಬ ನಿಯಮವನ್ನು ರದ್ದುಪಡಿಸಲು ಮುಂದಾಗಿದೆ.


ಭಾರತೀಯ ಆಡಳಿತ ಸೇವೆ (ಕೇಡರ್) ನಿಯಮಗಳು 1954 ರ ನಿಯಮ 6 (ಕೇಡರ್ ಅಧಿಕಾರಿಗಳ ನಿಯೋಜನೆ)ಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರವು ಮುಂದಾಗಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DoPT) ಜನವರಿ 12 ರಂದು ರಾಜ್ಯಗಳಿಗೆ ಪತ್ರ ಬರೆದು ತಿಳಿಸಿದೆ.

- Advertisement -


ಕೇಂದ್ರದ ಈ ನಿರ್ಧಾರಕ್ಕೆ ರಾಜ್ಯಗಳಿಂದ ಅದರಲ್ಲೂ ವಿಶೇಷವಾಗಿ ಪ್ರತಿಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದು ಒಕ್ಕೂಟ-ರಾಜ್ಯಗಳ ನಡುವೆ ಮತ್ತೊಂದು ಸಂಘರ್ಷಕ್ಕೆ ಎಡೆಮಾಡಿಕೊಡುವ ಮುನ್ಸೂಚನೆ ಕಾಣುತ್ತಿದೆ. ಕೇಂದ್ರದ ಇಂತಹ ನಡೆಯನ್ನು ವಿರೋಧಿಸಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳು ಸೇರಿದಂತೆ ಕನಿಷ್ಠ ಆರು ರಾಜ್ಯ ಸರ್ಕಾರಗಳು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಗೆ ಪತ್ರ ಬರೆದು ತಮ್ಮ ವಿರೋಧವನ್ನು ವ್ಯಕ್ತಪಡಿಸಿವೆ.


ಕೇಂದ್ರ ಸಚಿವಾಲಯಗಳಲ್ಲಿ ಅಖಿಲ ಭಾರತ ಸೇವೆಗಳ (ಎಐಎಸ್) ಅಧಿಕಾರಿಗಳ ಕೊರತೆ ಹಿನ್ನೆಲೆಯಲ್ಲಿ ಈ ಪತ್ರ ಬರೆಯಲಾಗಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ. “ಕೇಂದ್ರೀಯ ನಿಯೋಜನೆಗಾಗಿ ಸಾಕಷ್ಟು ಸಂಖ್ಯೆಯ ಅಧಿಕಾರಿಗಳನ್ನು ರಾಜ್ಯಗಳು ಒದಗಿಸುತ್ತಿಲ್ಲ” ಮತ್ತು ಕೇಂದ್ರದಲ್ಲಿ ಅಗತ್ಯವನ್ನು ಪೂರೈಸಲು ಅಧಿಕಾರಿಗಳ ಸಂಖ್ಯೆಯು ಸಾಕಾಗುವುದಿಲ್ಲ ಎಂದು ಡಿಒಪಿಟಿ ತನ್ನ ಪತ್ರದಲ್ಲಿ ತಿಳಿಸಿದೆ.


ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ಹಿಂದೆ ಡಿಸೆಂಬರ್ 20 ಮತ್ತು 27 ಮತ್ತು ಜನವರಿ 6 ರಂದು ರಾಜ್ಯಗಳಿಂದ ಪ್ರತಿಕ್ರಿಯೆ ಕೋರಿ ಮೂರು ಪತ್ರಗಳನ್ನು ಕಳುಹಿಸಿತ್ತು. ಆದರೆ ಆರು ರಾಜ್ಯಗಳು ಈ ಕ್ರಮವನ್ನು ವಿರೋಧಿಸಿದ ನಂತರ ಮತ್ತು ಉಳಿದವರು ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಅದು ಪ್ರಸ್ತಾಪವನ್ನು ಮತ್ತಷ್ಟು ಪರಿಷ್ಕರಿಸಿತು. ರಾಜ್ಯಗಳಿಗೆ ಪ್ರತಿಕ್ರಿಯಿಸಲು ಜನವರಿ 25 ರವರೆಗೆ ಸಮಯ ನೀಡಲಾಗಿದೆ. ರಾಜ್ಯಗಳು ಪ್ರತಿಕ್ರಿಯಿಸದಿದ್ದರೆ, ಸಚಿವಾಲಯವು ಜ್ಞಾಪಕಗಳನ್ನು ಕಳುಹಿಸುತ್ತದೆ ಮತ್ತು ನಂತರ ಅದನ್ನು ಭಾರತದ ಗೆಜೆಟ್ ನಲ್ಲಿ ಪ್ರಕಟಿಸುವ ಮೂಲಕ ನಿಯಮಗಳನ್ನು ಸೂಚಿಸುತ್ತದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



Join Whatsapp