ಕೊಡಗು : ಮನೆ ಹಾನಿಗೆ ಪರಿಹಾರ ಪರಿಶೀಲಿಸಿ ಕಡತ ಮುಕ್ತಾಯಗೊಳಿಸಲು ಜಿಲ್ಲಾಧಿಕಾರಿ ಸೂಚನೆ

Prasthutha|

ಮಡಿಕೇರಿ: ಭಾರಿ ಮಳೆಯಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ಪರಿಹಾರ ತಲುಪಿಲ್ಲ ಎಂಬ ದೂರುಗಳು ಬರುತ್ತಿದ್ದು, ಈ ಹಿನ್ನೆಲೆ ಮನೆ ನಿರ್ಮಿಸಿದ್ದಲ್ಲಿ ಆಯಾಯ ಹಂತಕ್ಕೆ ಅನುಗುಣವಾಗಿ ತಕ್ಷಣವೇ ಪರಿಹಾರ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಇಂತಹ ಪ್ರಕರಣಗಳನ್ನು ನಿಯಮಾನುಸಾರ ಮುಕ್ತಾಯಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೋಚನೆ ನೀಡಿದ್ದಾರೆ. 

- Advertisement -

ಜಿಲ್ಲೆಯಲ್ಲಿ 2019, 2020 ಮತ್ತು 2021ರಲ್ಲಿ ಸಂಭವಿಸಿದ ಭಾರಿ ಮಳೆಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ವಿತರಣೆ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.

ಭಾರಿ ಮಳೆಯಿಂದ ಮನೆ ಹಾನಿ ಆಗಿದ್ದಲ್ಲಿ ಎ ಮತ್ತು ಬಿ1 ವಿಭಾಗದ ಮನೆಗಳಿಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಪ್ರಕಟಿಸಲಾಗಿತ್ತು, ಬಿ2 ವಿಭಾಗದ ಮನೆ ಹಾನಿಗೆ ರೂ. 3 ಲಕ್ಷ ಪರಿಹಾರ ಒದಗಿಸಲಾಗುತ್ತಿದೆ. ಅದರಂತೆ ಈಗಾಗಲೇ ವಾಸ ಮಾಡುತ್ತಿದ್ದ ಅಥವಾ ಹತ್ತಿರದ ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳುತ್ತಿದ್ದಲ್ಲಿ, ಅಂತಹ ಕುಟುಂಬಗಳ ಮನೆಗಳನ್ನು ಜಿಪಿಎಸ್ ಮಾಡಿ ಹಣ ಬಿಡುಗಡೆ ಮಾಡಬೇಕು ಎಂದು ಸೂಚಿಸಿದರು. 

- Advertisement -

ಪ್ರತೀ ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳು ಮನೆ ನಿರ್ಮಾಣ ಸಂಬಂಧಿಸಿದಂತೆ ಪರಿಶೀಲಿಸಿ ವರದಿ ನೀಡಬೇಕು. ಜಿಪಿಎಸ್ ಅಪ್ ಲೋಡ್ ಸಂಬಂಧಿಸಿದಂತೆ ಪಿಡಿಒಗಳು ಮತ್ತು ತಹಶೀಲ್ದಾರರು ತಮ್ಮ ಹಂತದಲ್ಲಿ ಎಷ್ಟಿವೆ ಎಂಬ ಬಗ್ಗೆ ದೈನಂದಿನ ಮಾಹಿತಿ ನೀಡಬೇಕು. ಜೊತೆಗೆ ಆದ್ಯತೆ ಮೇಲೆ ಕೆಲಸ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಹೊಳೆ ಬದಿ ಮನೆ ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರದ ನಿರ್ದೇಶನದಂತೆ ಈಗಾಗಲೇ ಒಂದು ಲಕ್ಷ ರೂ ಪರಿಹಾರ ನೀಡಲಾಗಿದೆ. ಮನೆ ನಿರ್ಮಾಣ ಸಂಬಂಧ 4 ಹಂತದಲ್ಲಿ ಪರಿಹಾರ ಹಣ ಬಿಡುಗಡೆ ಮಾಡಲಾಗುತ್ತದೆ. ಒಂದು ಲಕ್ಷ ರೂ ಪರಿಹಾರ ಪಡೆದ ಕುಟುಂಬಗಳು ಇದುವರೆಗೆ ಮನೆ ನಿರ್ಮಾಣಕ್ಕೆ ಮುಂದಾಗದಿದ್ದಲ್ಲಿ, ಅಂತಹ ಕುಟುಂಬಗಳಿಗೆ ಈಗಾಗಲೇ ಅಂತಿಮ ನೋಟೀಸು ನೀಡಲಾಗಿದೆ. ಆದರೂ ಮನೆ ಕಟ್ಟಲು ದುರಸ್ತಿ ಮಾಡಿಕೊಳ್ಳಲು ಆಸಕ್ತಿ ತೋರದಿದ್ದಲ್ಲಿ ಇದೇ ಹಂತದಲ್ಲಿಯೇ ಮುಕ್ತಾಯಗೊಳಿಸಲಾಗುವುದು ಎಂಬ ಸ್ಪಷ್ಟ ಸಂದೇಶವನ್ನು ಎಲ್ಲಾ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಅಧಿಕಾರಿಗಳ ಮುಖಾಂತರ ಫಲಾನುಭವಿಗಳಿಗೆ ಮಾಹಿತಿ ನೀಡಲು ಸೂಚಿಸಲಾಯಿತು.

 ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಭೂ ದಾಖಲೆಗಳ ಉಪ ನಿರ್ದೇಶಕರಾದ ಪಿ.ಶ್ರೀನಿವಾಸ್, ತಹಶೀಲ್ದಾರರಾದ ಮಹೇಶ್, ಗೋವಿಂದರಾಜು, ಯೋಗಾನಂದ, ಪ್ರಕಾಶ್, ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ್, ತಾ.ಪಂ.ಇಒಗಳಾದ ಜಯಣ್ಣ ಇತರರು ಮಾಹಿತಿ ನೀಡಿದರು.



Join Whatsapp