ನವದೆಹಲಿ: ಚಂಡೀಗಢದಿಂದ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಕರೆತಂದ ಮೃತ ವ್ಯಕ್ತಿಯೊಬ್ಬರ ಜೀವಂತ ಹೃದಯವನ್ನು ಗ್ರೀನ್ ಕಾರಿಡಾರ್ ಮೂಲಕ ನಗರದ ಸಂಚಾರ ಪೊಲೀಸರು ಕೇವಲ 11 ನಿಮಿಷಗಳಲ್ಲಿ ಏಮ್ಸ್ ಆಸ್ಪತ್ರೆಗೆ ಸಾಗಿಸಲು ನೆರವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದೆಹಲಿ ವಿಮಾನ ನಿಲ್ದಾಣಕ್ಕೆ ಚಂಡೀಗಢದಿಂದ ಇಂಡಿಗೋ ವಿಮಾನದಲ್ಲಿ ನಿನ್ನೆ ಮಧ್ಯಾಹ್ನ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾದ ರೋಗಿಯೊಬ್ಬರಿಗೆ ಕಸಿ ಮಾಡಲು ಜೀವಂತ ಹೃದಯ ತರಲಾಯಿತು. ಇದಾದ ಬಳಿಕ ಏಮ್ಸ್ನ ಒಆರ್ ಬಿಒ ವಿಭಾಗದ ಮುಖ್ಯಸ್ಥರಿಂದ ಬಂದ ಮನವಿಯ ಆಧಾರದ ಮೇಲೆ 12 ಕಿ.ಮೀ ದೂರವನ್ನು 11 ನಿಮಿಷಗಳಲ್ಲಿ ತಲುಪಲಾಯಿತು.
ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ವಿಮಾನ ನಿಲ್ದಾಣದಿಂದ ಏಮ್ಸ್ ಆಸ್ಪತ್ರೆಗೆ 11 ನಿಮಿಷದಲ್ಲಿ ಹೃದಯ ತೆಗೆದುಕೊಂಡು ಹೋಗಲಾಯಿತು ಎಂದು ಸಂಚಾರ ವಿಭಾಗದ ಡಿಸಿಪಿ ತಿಳಿಸಿದ್ದಾರೆ.
ಗ್ರೀನ್ ಕಾರಿಡಾರ್:
ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2:19 ಕ್ಕೆ ಆ್ಯಂಬುಲೆನ್ಸ್ ಹೊರಟ ಹೃದಯ 2:30 ಕ್ಕೆ ಏಮ್ಸ್ ಆಸ್ಪತ್ರೆ ತಲುಪಿತು. ಏಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ದೆಹಲಿ ಟ್ರಾಫಿಕ್ ಪೊಲೀಸರ ಸಹಕಾರವನ್ನು ಶ್ಲಾಘಿಸಿ, ಸರಿಯಾದ ಸಮಯಕ್ಕೆ ಹೃದಯ ರವಾನೆ ಮಾಡಲು ಸಹಕರಿಸಿದ್ದಕ್ಕೆ ಧನ್ಯವಾದ ತಿಳಿಸಿದೆ.