ಪಾಲಕ್ಕಾಡ್: ಸರ್ಕಾರಿ ಇಲಾಖೆಗಳಲ್ಲಿ ಅದರಲ್ಲೂ ವಿಶೇಷವಾಗಿ RTO ಕಚೇರಿಗಳಲ್ಲಿ ಭ್ರಷ್ಟಾಚಾರದ ಭರಾಟೆ ಇಂದು ನಿನ್ನೆಯ ಸುದ್ದಿಯಲ್ಲ. ಆದರೆ ಕೇರಳದ RTO ಚೆಕ್’ಪೋಸ್ಟ್ ಒಂದರಲ್ಲಿ ವಿಜಿಲೆನ್ಸ್ ತಂಡವು ದಾಳಿ ನಡೆಸಿದ ವೇಳೆ ಸಿಕ್ಕ ವಸ್ತುಗಳನ್ನು ನೋಡಿ ಅಧಿಕಾರಿಗಳು ಕೆಲಕಾಲ ತಬ್ಬಿಬ್ಬಾಗಿದ್ದಾರೆ.
ಕೇರಳ-ತಮಿಳುನಾಡು ಗಡಿಭಾಗದ ಪ್ರಮುಖ ಚೆಕ್’ಪೋಸ್ಟ್, ಪಾಲಕ್ಕಾಡ್’ನ ವಾಳಯಾರ್’ನಲ್ಲಿ RTO ಸಿಬ್ಬಂದಿ ಲಂಚಕ್ಕೆ ಕೈಯೊಡ್ಡುವುದು ಹಲವಾರು ವರ್ಷಗಳಿಂದಲೂ ನಡೆಯುತ್ತಿದೆ. ಆದರೆ ಇದೀಗ ಮೇಲಾಧಿಕಾರಿಗಳ ದಾಳಿಗಳಿಂದ ತಪ್ಪಿಸುವ ಸಲುವಾಗಿ ಲಂಚದ ಸ್ವರೂಪವನ್ನು ಬದಲಾಯಿಸಿದ್ದಾರೆ. ಇಷ್ಟು ಸಮಯ ಝಣ ಝಣ ಕಾಂಚಾಣಕ್ಕೆ ಕೈಯೊಡ್ಡುತ್ತಿದ್ದ ಸಿಬ್ಬಂದಿ, ಇದೀಗ ತರಕಾರಿ ಮತ್ತು ಹಣ್ಣುಗಳ ರೂಪದಲ್ಲಿ ಲಂಚ ತೆಗೆದುಕೊಳ್ಳುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ವಾಳಯಾರ್’ನ RTO ಚೆಕ್’ಪೋಸ್ಟ್ ಸಿಬ್ಬಂದಿ, ಲಾರಿಗಳಲ್ಲಿ ಬರುವ ತರಕಾರಿ ಮತ್ತು ಹಣ್ಣುಗಳನ್ನು ಲಂಚವಾಗಿ ಪಡೆಯುವ ವೇಳೆ ಕೇರಳ ವಿಜಿಲೆನ್ಸ್ ಅಧಿಕಾರಿಗಳು ಮಾರುವೇಷದಲ್ಲಿ ದಾಳಿ ಮಾಡಿದ್ದು, ಲಂಚಕೋರ RTO ಚೆಕ್’ಪೋಸ್ಟ್ ಸಿಬ್ಬಂದಿ ರೆಡ್’ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನಗದು ಬದಲು ಕುಂಬಳಕಾಯಿ ಮತ್ತು ಕಿತ್ತಳೆ ಹಣ್ಣು ಸೇರಿದಂತೆ ಇತರೆ ರೂಪದಲ್ಲಿ ಲಂಚ ಪಡೆಯುತ್ತಿದ್ದರು. ಹಣ್ಣು-ತರಕಾರಿಗಳ ಜೊತೆಗೆ ದಾಳಿಯ ವೇಳೆ 67 ಸಾವಿರ ನಗದನ್ನು ವಶ ಪಡಿಸಿಕೊಳ್ಳಲಾಗಿದೆ.
ವಿಜಿಲೆನ್ಸ್ ದಾಳಿಯ ಸುಳಿವು ಸಿಗುತ್ತಲೇ ಮೋಟಾರು ವಾಹನ ಇನ್ಸ್’ಪೆಕ್ಟರ್ ಬಿನೋಯ್, ಸಮೀಪದ ಕಾಡಿಗೆ ಓಡಿಹೋಗಿ ತಪ್ಪಿಸಿಕೊಂಡಿದ್ದು, ಸಹಾಯಕ ಮೋಟಾರು ವಾಹನ ಇನ್ಸ್’ಪೆಕ್ಟರ್’ಗಳಾದ ಜಾರ್ಜ್, ಪ್ರವೀಣ್, ಅನೀಶ್ ಹಾಗೂ ಕೃಷ್ಟಕುಮಾರ್ ವಿಜಿಲೆನ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.