ಬೆಂಗಳೂರು: ಕೇವಲ ಹನ್ನೊಂದು ತಿಂಗಳು ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡರು ಕಲ್ಪನೆಗೂ ಮೀರಿದ ಆಡಳಿತಾತ್ಮಕ ಜನಪರ ನಿಲುವುಗಳನ್ನು ತೆಗೆದುಕೊಂಡ ಮುತ್ಸದ್ಧಿ, ಪ್ರಧಾನಿಯಾದರೂ ಸಾಮಾನ್ಯನಂತೆ ಬದುಕಿದ್ದರು. ಮಾನವೀಯ ನೆಲೆಯಲ್ಲಿ ಚಿಂತನೆ ನಡೆಸಿದವರು. ಇವೆಲ್ಲದಕ್ಕೂ ಸಮಯಾವಕಾಶ ಹೊಂದಿಸಿಕೊಳ್ಳುವ ವಿಶಿಷ್ಟ ವ್ಯಕ್ತಿತ್ವ ಅವರದಾಗಿದೆ ಎಂದು ಹಿರಿಯ ನ್ಯಾಯವಾದಿ ಬಿ.ಟಿ. ವೆಂಕಟೇಶ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಚರ್ಚ್ ಸ್ಟ್ರೀಟ್ ನ ಬಿಪಿಎಲ್ ಬಿಲ್ಡಿಂಗ್ ನಲ್ಲಿ ಬುಕ್ ವರ್ಮ್ ಸಂಯೋಜಿತ ಹಾಗೂ ಪೆಂಗ್ವಿನ್ ಸಂಸ್ಥೆ ಪ್ರಕಟಿಸಿದ ದೇವೇಗೌಡರ ಬಗೆಗಿನ ಫುರೋಸ್ ಇನ್ ಎ ಫೀಲ್ಡ್ ಕೃತಿಯ ಲೇಖಕ ಸುಗತ ಶ್ರೀನಿವಾಸರಾಜು ಅವರು ನಡೆಸಿದ ಸಂವಾದದಲ್ಲಿ ಬಿ. ಟಿ ವೆಂಕಟೇಶ್ ಮಾತನಾಡಿ, ಗೌಡರು, ಅತಂತ್ರ ಸ್ಥಿತಿಯಲ್ಲಿ ಪ್ರಧಾನಿಯಾದರು ಎಂದು ಹೋರನೋಟಕ್ಕೆ ಕಾಣುತ್ತದೆ. ಆದರೆ, ಆ ಸ್ಥಾನಕ್ಕೆ ತಕ್ಕ ವ್ಯಕ್ತಿತ್ವ ಎಂಬುದು ಬಹುತೇಕ ನಾಯಕರು ತಿಳಿದಿದ್ದರು. ಅವರ ಆಶಯಗಳನ್ನು ಹುಸಿ ಮಾಡದಂತೆ ಪರಿಶುದ್ಧ ಆಡಳಿತ ನೀಡಿ, ವಿರೋಧಿಗಳಿಂದಲೂ ಪ್ರಶಂಸೆಗೆ ಒಳಗಾದರು ಎಂದು ಅಭಿಪ್ರಾಯಪಟ್ಟರು.
‘ದೇವೇಗೌಡರ ಆತ್ಮಚರಿತ್ರೆ ಎಂದರೆ ಪ್ರಜಾಪ್ರಭುತ್ವದ ಆಚರಣೆಯೇ ಆಗಿದೆ. ಅವರ ಆಡಳಿತದ ವೈಖರಿಯು ಪ್ರಜಾಪ್ರಭುತ್ವವನ್ನೇ ಉಸಿರಾಡಿತ್ತು. ಕಾವೇರಿ-ಕೃಷ್ಣ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಅವರು ತೋರಿದ ಆಡಳಿತಾತ್ಮಕ ಜಾಣ್ಮೆ ಐತಿಹಾಸಿಕವಾಗಿದೆ. ಆಲಮಟ್ಟಿ ಆಣೆಕಟ್ಟು ಸಮಸ್ಯೆ ಪರಿಹಾರದಲ್ಲೂ ರೈತರ ಪಾಲಿಗೆ ಅವರು ಜಂಗಮರು. ರೈತರಿಗಂತೂ ಅನ್ಯಾಯ ಮಾಡಲೇ ಇಲ್ಲ. ಇಂತಹ ಸೇವೆಗಳನ್ನು ಸಂಶೋಧನಾ ಅಧ್ಯಯನದ ಮಾದರಿಯಲ್ಲಿ ಸುಗತ ಶ್ರೀನಿವಾಸರಾಜು ಅವರು ಹೆಚೆ.ಡಿ.ದೇವೇಗೌಡರ ಆತ್ಮಚರಿತ್ರೆ ಬರೆದಿದ್ದು ಸಹ ಗುರುತರ ದಾಖಲೆಯಾಗಿದೆ ಎಂದು ಪ್ರಶಂಸಿಸಿದರು.
ಕೃತಿಯ ಲೇಖಕ -ಪತ್ರಕರ್ತ ಸುಗತ ಶ್ರೀನಿವಾಸರಾಜು ಮಾತನಾಡಿ, ಬಹು ವರ್ಷಗಳಿಂದ ನನೆಗುದಿಗೆ ಬಿದ್ದ ಬಹುತೇಕ ಸಮಸ್ಯೆಗಳನ್ನು ಹೆಕ್ಕಿ ಹೆಕ್ಕಿ ತೆಗೆಯುವ ಮೂಲಕ ನಿರೀಕ್ಷೆಗೂ ಮೀರದ ಪರಿಹಾರ ಸೂಚಿಸಿದ್ದರು. ಆದರೂ ಗೌಡರು ಮಾಧ್ಯಮದ ಮುಂದೆ ಬಂದು ಪ್ರಚಾರ ಪಡೆಯಲಿಲ್ಲ. ಇಂತಹ ಸಂಗತಿಗಳ ಕುರಿತು ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.
ಚಳವಳಿಗಾರರಿಗೆ ಗೌರವ ನೀಡುವ ದೇವೇಗೌಡರು ಒಮ್ಮೆ ಮೇಧಾ ಪಾಟ್ಕರ್ ಅವರು ನರ್ಮದಾ ಆಣೆಕಟ್ಟು ಎತ್ತರ ವಿರೋಧಿಸುವಾಗ ಹಿಗ್ಗಾಮುಗ್ಗಾ ದೇವೇಗೌಡರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅವರ ಮೇಲೆ ಪ್ರಕರಣ ದಾಖಲಿಸಲು ಮುಂದಾದ ಪೊಲೀಸರನ್ನು ತಡೆದು, ಚಳವಳಿಗಾರರಿಗೆ ಮಾತನಾಡುವ ಹಕ್ಕಿದೆ ಎಂದು ಹೇಳಿದ್ದನ್ನು ಸ್ಮರಿಸಿದರು.
ಛಾಯಾಚಿತ್ರಗ್ರಾಹಕ ಭಾನುಪ್ರಸಾದ ಚಂದ್ರ ಮಾತನಾಡಿ, ಎಚ್.ಡಿ. ದೇವೇಗೌಡರ ವಸ್ತ್ರಗಳ ವಿಶೇಷತೆ ಎಂದರೆ ಬಿಳಿ ಟವೆಲ್ ಹಾಗೂ ಮಾತನಾಡುವಾಗ ತಲೆ ಮೇಲೆ ಕೈ ಸವರುವುದು. ಈ ವಿಶಿಷ್ಟ ಭಂಗಿಯನ್ನು ತಾವು ಫೋಟೊ ತೆಗೆದಿದ್ದು, ತಮ್ಮ ಭಾಗ್ಯ ಎಂದರು.
ಹಿರಿಯ ನಿವೃತ್ತ ಅಧಿಕಾರಿ ಎಂ.ಆರ್. ಶ್ರೀನಿವಾಸಮೂರ್ತಿ ಸೇರಿದಂತೆ ಇತರೆ ಗಣ್ಯರು ಹೆಚ್.ಡಿ.ದೇವೇಗೌಡರ ಆಡಳಿತ ವೈಖರಿ, ರಾಜನೀತಿಯನ್ನು ಪ್ರಶಂಸಿಸಿದರು. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿದಂತೆ ಇತರೆ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಮಾರಂಭವನ್ನು ‘ಬುಕ್ ಬ್ರಹ್ಮ’ ಫೇಸ್ ಬುಕ್ ಪೇಜ್ ಹಾಗೂ ಯೂಟ್ಯೂಬ್ ನಲ್ಲಿ ನೇರವಾಗಿ ಪ್ರಸಾರಗೊಳಿಸಿತು.