ಮುಸ್ಲಿಮ್ ವ್ಯಕ್ತಿಯ ಎನ್ ಕೌಂಟರ್ ಗೆ ಪ್ರಯತ್ನಿಸಿದ ಪಿಎಸ್ಐ ನಂಜನಾಯ್ಕ ವಜಾಕ್ಕೆ ಒತ್ತಾಯಿಸಿ ಎಸ್ ಡಿಪಿಐ ನಿಯೋಗದಿಂದ ಎಸ್.ಪಿ.ಗೆ ಮನವಿ

Prasthutha|

ಕುಂದಾಪುರ: ಅಮಾಯಕ ಮುಸ್ಲಿಮ್ ವ್ಯಕ್ತಿಯ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಎನ್ ಕೌಂಟರ್ ಮಾಡಲು ಪ್ರಯತ್ನಿಸಿದ ಪಿಎಸ್ ಐ ನಂಜನಾಯಕ್ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ SDPI ಉಡುಪಿ ಜಿಲ್ಲಾ ನಿಯೋಗ ಮನವಿ ಸಲ್ಲಿಸಿದೆ.

- Advertisement -

ಕುಂದಾಪುರ ತಾಲೂಕು ತ್ರಾಸಿ ಪೊಲೀಸ್ ಠಾಣಾ ವ್ಯಾಪ್ತಿಯ ಗಂಗೊಳ್ಳಿ ನಿವಾಸಿಯಾದ ಮುಹಮ್ಮದ್ ಇಬ್ರಾಹಿಂ ಎಂಬವರು ತನ್ನ ಗೆಳೆಯ ಫ್ರಾನ್ಸಿಸ್ ಉಚಿತವಾಗಿ ನೀಡಿದ ಕರುವನ್ನು ಸಾಕಲೆಂದು ಮನೆಗೆ ತಂದಿದ್ದರು. ಇಬ್ರಾಹಿಂ ಅವರ ಮನೆಯ ಹಟ್ಟಿಯಲ್ಲಿ ದನದ ಕರು ಇರುವುದರ ಬಗ್ಗೆ ಮಾಹಿತಿ ಪಡೆದ ಪಿಎಸ್ ಐ ನಂಜನಾಯ್ಕ ಮತ್ತು ಇತರ ಸಿಬ್ಬಂದಿ, 26-12-2021 ರ ಸಂಜೆ 6 ಗಂಟೆಯ ಹೊತ್ತಿಗೆ ಇಬ್ರಾಹಿಂ ಅವರ ಮನೆಗೆ ಬಂದು ಕರುವಿನ ಬಗ್ಗೆ ವಿಚಾರಿಸಿದ್ದಾರೆ.  ಇದನ್ನು ಸಾಕಲೆಂದು ತಂದಿರುವುದಾಗಿ ಇಬ್ರಾಹಿಂ ಹೇಳಿದಾಗ ಪಿಎಸ್ ಐ ನಂಜನಾಯ್ಕ “ನಾನು ಒಂದು ವರ್ಷ ಬಿಟ್ಟು ಬಂದು ವಿಚಾರಿಸುವಾಗಲೂ ಇದು ಇಲ್ಲಿ ಇರಬೇಕು” ಎಂದು ಗದರಿಸಿ ಆ ಕರುವಿನೊಂದಿಗೆ ಇಬ್ರಾಹಿಂ ಅವರ ಫೋಟೋ ತೆಗೆದು ಮರಳಿ ಹೋಗಿದ್ದಾರೆ. ನಂತರ ಸಹಿ ಹಾಕಲು ಠಾಣೆಗೆ ಬರಬೇಕು, ಈ ವಿಚಾರವನ್ನು  ಯಾರ ಬಳಿಯೂ ಹೇಳಬಾರದು. ಒಂದು ವೇಳೆ ಹೇಳಿದರೆ ನಿನ್ನನ್ನು ಸುಮ್ಮನೆ  ಬಿಡುವುದಿಲ್ಲ ಎಂದು ಗದರಿಸಿ ಠಾಣೆಗೆ ಕರೆಸಿಕೊಂಡಿದ್ದಾರೆ, ಅಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿದ್ದಾರೆ ಎಂದು ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಆರೋಪಿಸಿದ್ದಾರೆ.

ಇಬ್ರಾಹಿಂ ಅವರಿಗೆ ದನವನ್ನು ನೀಡಿದ್ದ ಫ್ರಾನ್ಸಿಸ್ ಅವರನ್ನು ರಾತ್ರಿ ಎಂಟು ಗಂಟೆ ಹೊತ್ತಿಗೆ ಠಾಣೆಗೆ ಕರಿಸಿ ಅವರಿಂದ ವಿವರಣೆಯನ್ನು  ಪೊಲೀಸರು ಪಡೆದಿದ್ದಾರೆ. ಫ್ರಾನ್ಸಿಸ್ ಕೂಡ ತಾವು ಕರುವನ್ನು ಸಾಕಲು ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೂ ಇಬ್ರಾಹಿಂ ಅವರನ್ನು ರಾತ್ರಿಯಿಡೀ ಠಾಣೆಯಲ್ಲಿ ಅಕ್ರಮವಾಗಿ ಪೊಲೀಸರು ಕೂಡಿ ಹಾಕಿದ್ದರು. ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ಇಬ್ರಾಹಿಂ ಅವರ ಮನೆಗೆ ಹೋದ ಪೊಲೀಸರು, ಮನೆಯಲ್ಲಿದ್ದ ಇಬ್ರಾಹಿಂ ಪತ್ನಿಯನ್ನು ಬೆದರಿಸಿ  ಕರುವನ್ನು ಠಾಣೆಗೆ ಸಾಗಿಸಿದ್ದರು. ಮರುದಿನ ಅಂದರೆ 27-12-2021 ರ ಬೆಳಿಗ್ಗೆ ಜನಸಂಚಾರ ಕಡಿಮೆ ಇರುವ ಮಂಕಿ ಕ್ರಾಸ್ ಬಳಿ  ಇಬ್ರಾಹಿಂ ಅವರನ್ನು ಜೀಪಿನಲ್ಲಿ ಕರೆದುಕೊಂಡು ಹೋಗಿ ಜೀಪಿನಿಂದ ಇಳಿದು ಓಡುವಂತೆ ಬಲವಂತಪಡಿಸಿದ್ದಾರೆ.  ಇಬ್ರಾಹಿಂ ಓಡಲು ನಿರಾಕರಿಸಿದಾಗ ಅವರ ತಲೆಗೆ ರಿವಾಲ್ವರ್ ಇಟ್ಟು “ನಾನು ಶಿರಸಿ ಹಾಗೂ ಇತರ ಕಡೆಗಳಲ್ಲಿ ಎನ್ ಕೌಂಟರ್ ಮಾಡಿ ಬಂದವನು, ನನ್ನ ಬಗ್ಗೆ ನಿನಗೆ ಗೊತ್ತಿಲ್ಲ, ನಿನ್ನನ್ನು ಎನ್ ಕೌಂಟರ್ ಮಾಡಿ ಸಾಯಿಸುತ್ತೇನೆ” ಎಂದು ನಂಜನಾಯ್ಕ ಬೆದರಿಕೆ ಹಾಕಿದ್ದಾರೆ. ಭಯಭೀತನಾದ  ಇಬ್ರಾಹಿಂ ಎಸ್ಐ ನಂಜನಾಯಕನ ಕಾಲಿಗೆ ಬಿದ್ದು ನನಗೆ ಏನೂ  ಮಾಡಬೇಡಿ ಎಂದು ಬೇಡಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಆ ದಾರಿಯಲ್ಲಿ ಕೆಲವು ವಾಹನಗಳು ಸಂಚರಿಸುವುದನ್ನು ಕಂಡ ಹಿನ್ನೆಲೆಯಲ್ಲಿ ಇಬ್ರಾಹಿಂ ಅವರನ್ನು ಜೀಪಿನಲ್ಲಿ ಕುಳ್ಳಿರಿಸಿ ಸ್ವಲ್ಪ ಮುಂದೆ ಕರೆದುಕೊಂಡು ಹೋಗಿ ಅಲ್ಲಿಗೆ ಇಬ್ಬರು ಬಜರಂಗದಳದ ಕಾರ್ಯಕರ್ತರನ್ನು (ಅದರಲ್ಲಿ ಒಬ್ಬನ ಹೆಸರು ಮಹೇಶ್) ಕರೆಸಿ ಒಂದು ಪ್ಲಾಸ್ಟಿಕ್ಕನ್ನು ಹಾಸಿ ಅವರು ಚೀಲದಲ್ಲಿ ತಂದಿದ್ದ ಕತ್ತಿ,  ತಲವಾರು, ಇತರ ಸಾಧನಗಳನ್ನು ಅದರ  ಮೇಲೆ ಹಾಕಿ ಇವರು ಇಲ್ಲಿ ದನ ಕಡಿಯಲು ಪ್ರಯತ್ನಿಸುತ್ತಿರುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು ಎಂದು ಬಿಂಬಿಸಿ ಇಬ್ರಾಹಿಂರ ಮೇಲೆ ಸುಳ್ಳು ಕೇಸು ಹಾಕಿ ಸಂಜೆ ವೇಳೆಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.  ತನ್ನ ಮೇಲಾದ  ದೌರ್ಜನ್ಯವನ್ನು  ಸಂತ್ರಸ್ತ  ಯುವಕ ಇಬ್ರಾಹಿಂ  ಪತ್ರಿಕಾಗೋಷ್ಠಿ  ಮೂಲಕ  ತಿಳಿಸಿದ್ದಾರೆ ಎಂದು ನಝೀರ್ ಅಹ್ಮದ್ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

- Advertisement -

ಪೊಲೀಸರು ದಾಖಲಿಸಿರುವ F I R ನಲ್ಲಿ ದಿನಾಂಕ 27-12-2021ರ ಬೆಳಿಗ್ಗೆ 8:15 ರ ಹೊತ್ತಿಗೆ ದನ ವಧೆ  ಮಾಡುವ ಸಂದರ್ಭದಲ್ಲಿ ದಾಳಿ ನಡೆಸಿ ಇಬ್ರಾಹಿಂ ಅವರನ್ನು ಬಂಧಿಸಿರುವುದಾಗಿ ನಮೂದಿಸಲಾಗಿದೆ. ಆದರೆ 26-12- 2021ರ ಸಂಜೆಯಿಂದಲೇ ಇಬ್ರಾಹಿಂ ಠಾಣೆಯಲ್ಲಿ ಇರುವುದಕ್ಕೆ ದಾಖಲೆಗಳಿವೆ. ಆದ್ದರಿಂದ ಅಮಾಯಕ ಇಬ್ರಾಹಿಂ ವಿರುದ್ಧ ಸುಳ್ಳು ಕೇಸು ದಾಖಲಿಸಿದ್ದಲ್ಲದೆ ಅವರನ್ನು ಎನ್ ಕೌಂಟರ್ ಮಾಡಿ ಕೊಲೆ ಮಾಡುವ ಪ್ರಯತ್ನ ನಡೆದಿದೆವೆಂಬುದು ಇದರಿಂದ  ಸ್ಪಷ್ಟವಾಗುತ್ತದೆ. ಪಿಎಸ್ಎ ನಂಜನಾಯ್ಕ ವಿರುದ್ಧ ಇಂತಹ ಹಲವಾರು ಆರೋಪಗಳಿವೆ. ಈ ಹಿಂದೆ ನಿರೀಕ್ಷಣಾ ಜಾಮೀನು ಪಡೆದಿದ್ದ  ಇಬ್ಬರು ಯುವಕರನ್ನು ಠಾಣೆಗೆ ಕರೆಸಿ ಅವರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದಂತಹ ಘಟನೆ ಸಹ ನಡೆದಿವೆ ಎಂದು ನಜೀರ್ ಅಹ್ಮದ್ ತಿಳಿಸಿದ್ದಾರೆ.

ಈ ಎಲ್ಲ ಘಟನೆಗಳನ್ನು ಗಮನಿಸುವಾಗ, ನಂಜನಾಯ್ಕ ಪೂರ್ವಗ್ರಹಪೀಡಿತರಾಗಿ ಸಮಾಜದ ಒಂದು ವಿಭಾಗವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಪುನರಾವರ್ತಿತವಾಗಿ ಇಂತಹ ಘಟನೆಗಳು ನಡೆಯುತ್ತಿವೆ.  ಆದ್ದರಿಂದ ಪೊಲೀಸ್ ವರಿಷ್ಠಾಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ನಂಜನಾಯಕ ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು SDPI ಉಡುಪಿ ಜಿಲ್ಲಾ ನಿಯೋಗ ಮನವಿಯಲ್ಲಿ ಒತ್ತಾಯಿಸಿದೆ.

ನಿಯೋಗದಲ್ಲಿ ಜಿಲ್ಲಾಧ್ಯಕ್ಷರಾದ ನಝೀರ್ ಅಹ್ಮದ್, ಜಿಲ್ಲಾ ಉಪಾಧ್ಯಕ್ಷರಾದ ಶಾಹಿದ್ ಅಲಿ ಮತ್ತು ಝುರೈ ಉಪಸ್ಥಿತರಿದ್ದರು.



Join Whatsapp