ನವದೆಹಲಿ: ವ್ಯಾಪಕವಾಗಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ AIIMS ಪ್ರಾಧಿಕಾರ ಮಂಗಳವಾರ ವೈದ್ಯರ ಚಳಿಗಾಲದ ರಜೆಯನ್ನು ರದ್ದುಗೊಳಿಸಿದೆ.
ದೆಹಲಿಯ ಏಮ್ಸ್ ಆಸ್ಪತ್ರೆ ಪ್ರಾಧಿಕಾರ ಹೊರಡಿಸಿದ ತನ್ನ ಅಧಿಕೃತ ಸುತ್ತೋಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಸಿಬ್ಬಂದಿಗಳು ತಮ್ಮ ಕರ್ತವ್ಯಕ್ಕೆ ಮರಳುವಂತೆ ಸೂಚಿಸಿದೆ.
ಡಿಸೆಂಬರ್ 22 – 27 ರ ಕಚೇರಿಯ ಜ್ಞಾಪಕ ಪತ್ರದ ಮುಂದುವರಿದ ಭಾಗವಾಗಿ ದೇಶದೆಲ್ಲೆಡೆ ವ್ಯಾಪಕವಾಗಿ ಬೆಳೆಯುತ್ತಿರುವ ಕೋವಿಡ್ ಮತ್ತು ಒಮಿಕ್ರಾನ್ ಸಾಂಕ್ರಾಮಿಕದಿಂದಾಗಿ ಜನವರಿ 5 – 10 ರವರೆಗಿನ ರಜೆಯನ್ನು ರದ್ದುಗೊಳಿಸಲು ಸಕ್ಷಮ ಪ್ರಾಧಿಕಾರ ನಿರ್ಧರಿಸಿದೆ ಎಂದು AIIMS ನಿರ್ದೇಶಕರು ತಿಳಿಸಿದ್ದಾರೆ.
ಈ ಮಧ್ಯೆ ದೇಶಾದ್ಯಂತ ಒಮಿಕ್ರಾನ್ ಸೋಂಕಿತರ ಸಂಖ್ಯೆ 1892 ಕ್ಕೆ ತಲುಪಿದೆ. ಆದಾಗ್ಯೂ ಒಟ್ಟು ಒಮಿಕ್ರಾನ್ ಪಾಸಿಟಿವ್ ಪೈಕಿ 766 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದುವರೆಗೆ 23 ರಾಜ್ಯಗಳಲ್ಲಿ ಒಮಿಕ್ರಾನ್ ಸೋಂಕು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.