ಕ್ರೈಸ್ತ ಸಮುದಾಯದ ವಿರುದ್ಧದ ದೌರ್ಜನ್ಯ ಖಂಡಿಸಿ SDPI ಪ್ರತಿಭಟನೆ

Prasthutha|


ಮಡಿಕೇರಿ: ಕ್ರೈಸ್ತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಹಾಗೂ ಮತಾಂತರ ನಿಷೇಧ ಮಸೂದೆಯನ್ನು ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

- Advertisement -


ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘಪರಿವಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು.
ಎಸ್ ಡಿಪಿಐ ಮುಖಂಡ ಅಮೀನ್ ಮೊಹಿಸಿನ್ ಮಾತನಾಡಿ, ಕ್ರಿಶ್ಚಿಯನ್ ಸಮುದಾಯದ ವಿರುದ್ಧ ದೇಶಾದ್ಯಂತ ಇತ್ತೀಚೆಗೆ ನಡೆದ ಹಿಂಸಾಚಾರದ ಘಟನೆ ತೀವ್ರ ಖಂಡನೀಯವಾಗಿದ್ದು, ಸಂಘ ಪರಿವಾರವು ದೇಶದ ಕ್ರಿಶ್ಚಿಯನ್ ಸಮುದಾಯ ಸೇರಿದಂತೆ ಎಲ್ಲಾ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ಜನಾಂಗೀಯ ಹಿಂಸಾಚಾರವನ್ನು ತಕ್ಷಣ ನಿಲ್ಲಿಸಬೇಕೆಂದರು.


ಭಾರತದಲ್ಲಿ ಕ್ರಿಶ್ಚಿಯನ್ ಸಮುದಾಯದ ಮೇಲಿನ ದಾಳಿಗಳು ಮುಸ್ಲಿಮರ ಮೇಲಿನ ದಾಳಿಯಷ್ಟೇ ತೀವ್ರವಾಗಿ ನಡೆಸಲು ಪ್ರಾರಂಭಿಸಿದ್ದಾರೆ. ದೇಶದಲ್ಲಿ ಮುಸ್ಲಿಮರು ಸ್ವಾತಂತ್ರ್ಯಪೂರ್ವದಲ್ಲಿಯೇ ಸಂಘಪರಿವಾರದ ನಿರಂತರ ಆಕ್ರಮಣಗಳಿಗೆ ತುತ್ತಾಗಿದ್ದಾರೆ. ಆದರೆ ಸ್ವಾತಂತ್ರ್ಯದ ನಂತರ ಮುಸ್ಲಿಮರ ವಿರುದ್ಧದ ದಾಳಿಗಳು ಮತ್ತಷ್ಟು ತೀವ್ರಗೊಂಡಿವೆ ಮತ್ತು ಕ್ರಿಶ್ಚಿಯನ್ನರ ಮೇಲೆ ದಾಳಿಗಳು ಆರಂಭಗೊಂಡು ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದರು.

- Advertisement -


ಈ ಬಾರಿಯ ಕ್ರಿಸ್ಮಸ್ ಸಂದರ್ಭದಲ್ಲಿ ದೇಶಾದ್ಯಂತ ಕ್ರಿಶ್ಚಿಯನ್ ಸಮುದಾಯ ಮತ್ತು ಅವರ ಆರಾಧನಾ ಸ್ಥಳಗಳ ಮೇಲೆ ಭಯೋತ್ಪಾದಕ ಹಿಂದುತ್ವ ಫ್ಯಾಶಿಸ್ಟ್ ಶಕ್ತಿಗಳು ವಿಧ್ವಂಸಕ ಕೃತ್ಯ ಮತ್ತು ಹಿಂಸಾಚಾರವೆಸಗಿದವು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕ್ರಿಸ್ಮಸ್ ಮುನ್ನಾದಿನ ಮತ್ತು ಕ್ರಿಸ್ಮಸ್ ದಿನದಂದು ದಾಳಿಗಳು ನಡೆದಿದೆ ಎಂದು ಆರೋಪಿಸಿದ ಅವರು, ಸಂವಿಧಾನ ವಿರೋಧಿ ಮತಾಂತರ ನಿಷೇಧ ಮಸೂದೆ ಸಂವಿಧಾನದ ಪರಿಚ್ಛೇದ 25 ರ ಪೂರ್ಣ ಉಲ್ಲಘನೆಯಾಗಿದೆ. ಕೂಡಲೇ ಈ ಮಸೂದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.


ಪಕ್ಷದ ಜಿಲ್ಲಾಧ್ಯಕ್ಷ ಮುಸ್ತಫಾ ಮಡಿಕೇರಿ ಮಾತನಾಡಿ, ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಲು, ಆರೆಸ್ಸೆಸ್ ನ ಹಿಂಸಾಚಾರದ ಸಂತ್ರಸ್ತರು ತಕ್ಷಣ ಎಚ್ಚೆತ್ತುಕೊಂಡು ತಮ್ಮ ನೈಜ ಶತ್ರುವನ್ನು ಅರ್ಥಮಾಡಿಕೊಂಡು ಒಗ್ಗಟ್ಟಿನಿಂದ ಪ್ರತಿರೋಧಿಸಿ, ಆರೆಸ್ಸೆಸ್ ನೇತೃತ್ವದ ತೀವ್ರ ಬಲಪಂಥೀಯ ಹಿಂದುತ್ವ ಪಡೆಗಳ ಜನಾಂಗೀಯ ಕಾರ್ಯಸೂಚಿಯನ್ನು ಸೋಲಿಸಬೇಕೆಂದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಫಾದರ್ ಜೆರಾಲ್ಡ್ ಸಿಕ್ವೇರಾ, ಜಾರ್ಜ್ ಲಾಸ್ರಾಡೋ, ವಿಜು ಮಡಿಕೇರಿ, ಮೈಕಲ್ ವೇಗಸ್, ಅಬ್ದುಲ್ಲಾ, ನಗರಸಭಾ ಸದಸ್ಯರಾದ ಮೇರಿ ವೇಗಸ್, ಮನ್ಸೂರ್, ಬಶೀರ್ ಮತ್ತಿತರರು ಇದ್ದರು.



Join Whatsapp