ಮುಂಬೈ: 2 ಸಾವಿರಕ್ಕೂ ಅಧಿಕ ಪ್ರಯಾಣಿಕರಿದ್ದ ಐಷಾರಾಮಿ ಹಡಗಿನಲ್ಲಿ 66 ಮಂದಿಗೆ ಕೊರೊನಾ;ಇಡೀ ಹಡಗು ಐಸೋಲೇಟ್!

Prasthutha|

- Advertisement -

ಮುಂಬೈ: ಸುಮಾರು 2000 ಕ್ಕೂ ಅಧಿಕ ಪ್ರಯಾಣಿಕರು ಇದ್ದ ಮುಂಬೈ-ಗೋವಾ ಐಷಾರಾಮಿ ಕ್ರೂಸ್ ಹಡಗಿ ನಲ್ಲಿ ಒಬ್ಬ ಪ್ರಯಾಣಿಕರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಅದಾದ ಬೆನ್ನಲ್ಲೇ ಉಳಿದ ಪ್ರಯಾಣಿಕರನ್ನೂ ಸಹ ಅಲ್ಲಿಯೇ ಐಸೋಲೇಟ್ ಮಾಡಿ, ಎಲ್ಲರಿಗೂ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಲಾಗುತ್ತಿದೆ. ಅದರ ವರದಿಯೂ ಬರುತ್ತಿದ್ದು, ಸದ್ಯ ಈ ಕಾರ್ಡೆಲಿಯಾ ಕ್ರೂಸಸ್ ಐಷಾರಾಮಿ ಹಡಗಿನಲ್ಲಿ 66 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಒಬ್ಬರಲ್ಲಿ ಕೊವಿಡ್ 19 ಸೋಂಕು ಕಾಣಿಸಿಕೊಂಡ ನಂತರ, ಯಾರಿಗೂ ಹಡಗಿನಿಂದ ಹೊರ ಹೋಗಲು ಬಿಟ್ಟಿರಲಿಲ್ಲ. ವೈದ್ಯಕೀಯ ತಂಡ ಅಲ್ಲಿಯೇ ಇದ್ದುಕೊಂಡು ಎಲ್ಲರಿಗೂ ಆರ್ಟಿ-ಪಿಸಿಆರ್ ಟೆಸ್ಟ್ ಮಾಡುತ್ತಿದೆ ಎಂದು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ.

ಹಡಗಿನಲ್ಲಿ ಇದ್ದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆ, ಈ ಐಷಾರಾಮಿ ಹಡಗನ್ನು ಗೋವಾದಲ್ಲಿ ನಿಲ್ಲಿಸಲು ಮುಂಬೈ ಪೋರ್ಟ್ ಟ್ರಸ್ಟ್ ನಿರಾಕರಿಸಿದೆ. ಹಾಗಾಗಿ ಇದೀಗ ಹಡಗು ಮೊರ್ಮುಗೋವ್ ಪೋರ್ಟ್ ಕ್ರೂಸ್ ಟರ್ಮಿನಲ್ನಲ್ಲಿ ನಿಂತಿದೆ. ಪ್ರತಿಯೊಬ್ಬರಿಗೂ ಕೊವಿಡ್ 19 ಟೆಸ್ಟ್ ಮುಗಿದು, ರಿಪೋರ್ಟ್ ಬಂದ ಬಳಿಕವಷ್ಟೇ ಅಲ್ಲಿಂದ ತೆರಳಲು ಅವಕಾಶ ಮಾಡಿಕೊಡಲಾಗುವುದು. ನಾವು ವೈದ್ಯಕೀಯ ತಪಾಸಣೆಗಾಗಿ ಖಾಸಗಿ ಆಸ್ಪತ್ರೆಯೊಂದರ ಜತೆ ಟೈ-ಅಪ್ ಮಾಡಿಕೊಂಡಿದ್ದೇವೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ. ಹಾಗೇ, ಟ್ವೀಟ್ ಮಾಡಿ ಒಟ್ಟು 66 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದನ್ನು ತಿಳಿಸಿದ್ದಾರೆ. ಪ್ರಯಾಣಿಕರನ್ನು ಹಡಗಿನಿಂದ ಯಾವಾಗ ಕಳಿಸಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.

- Advertisement -

ಇನ್ನು ಹಡಗಿನಲ್ಲಿ ಇದ್ದವರೆಲ್ಲ ಎರಡೂ ಡೋಸ್ ಕೊರೊನಾ ಲಸಿಕೆ ಪಡೆದವರೇ ಆಗಿದ್ದಾರೆ. ಹಾಗಿದ್ದಾಗ್ಯೂ ಕೆಲವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇನ್ನು ಗೋವಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಬೇರೆಬೇರೆ ದೇಶಗಳಿಂದ ಬರುವ ಸುಮಾರು 4000 ದಷ್ಟು ಪ್ರಯಾಣಿಕರನ್ನು ಪ್ರತಿದಿನ ಕೊವಿಡ್ 19 ತಪಾಸಣೆಗೆ ಒಳಪಡಿಸಲಾಗುತ್ತಿದೆ. ಪ್ರತಿದಿನವೂ, ಪ್ರತಿ ವಿಮಾನದಲ್ಲೂ ಒಬ್ಬರಲ್ಲ ಒಬ್ಬರು ಕೊವಿಡ್ 19 ಸೋಂಕಿತರು ಇರುತ್ತಿದ್ದಾರೆ. ಹೀಗಾಗಿ ನಿಯಂತ್ರಣಕ್ಕೆ ಸಂಬಂಧಪಟ್ಟ ಶಿಷ್ಟಾಚಾರ ಪಾಲನೆ ಅತ್ಯಗತ್ಯ ಎಂದು ಹೇಳಿದ್ದಾರೆ.



Join Whatsapp