ಚಂಡಿಗಢ್: 50000 ರೂಪಾಯಿಗಿಂತ ಕಡಿಮೆ ವೇತನದ ಎಲ್ಲಾ ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ 75 ಶೇಕಡಾ ಮೀಸಲಾತಿಯನ್ನು ಒದಗಿಸುವ ಮಸೂದೆಯೊಂದನ್ನು ಗುರುವಾರ ಹರಿಯಾಣ ಸರಕಾರ ಅಂಗೀಕರಿಸಿದೆ.
ಉಪ ಮುಖ್ಯಮಂತ್ರಿ ದುಷ್ಯಂತ್ ಚೌಟಾಲ (ರಾಜ್ಯದ ಕಾರ್ಮಿಕ ಸಚಿವರು ಕೂಡ) ಮಸೂದೆಯನ್ನು ಮಂಡಿಸಿದ್ದಾರೆ. ಸೂಕ್ತ ಸ್ಥಳೀಯ ಅಭ್ಯರ್ಥಿ ದೊರೆಯದೆ ಇದ್ದರೆ ಕಂಪೆನಿಗಳು ಹೊರಗಿನವರನ್ನು ಆಹ್ವಾನಿಸಬಹುದಾಗಿದೆ ಎಂಬ ಉಪವಿಧಿಯನ್ನೂ ಕಾನೂನು ಹೊಂದಿದೆ. ಇಂತಹ ಪ್ರಕರಣದಲ್ಲಿ ಕಂಪೆನಿಗಳು ಸರಕಾರಕ್ಕೆ ಮಾಹಿತಿ ನೀಡಿ ಹೊರಗಿನಿಂದ ಜನರನ್ನು ನೇಮಿಸಬಹುದಾಗಿದೆ.
ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆಯು ಸಂವಿಧಾನದ 14 ಮತ್ತು 19ನೆ ವಿಧಿ (ಕಾನೂನಿನ ಮುಂದೆ ಸಮಾನತೆ ಮತ್ತು ಭಾರತದಲ್ಲಿ ಯಾವುದೇ ಕಡೆ ಯಾವುದೇ ಉದ್ಯೋಗವನ್ನು ಮಾಡುವ ಹಕ್ಕು)ಗಳೊಂದಿಗೆ ತಿಕ್ಕಾಡುವ ಕಾರಣ ಅದು ಪಾಸಾಗಬೇಕಾದರೆ ಅಧ್ಯಕ್ಷ ರಾಮನಾಥ್ ಕೋವಿಂದ್ ರ ಸಮ್ಮತಿಯ ಅಗತ್ಯವಿದೆ.