ಕರಾವಳಿಯ ಕೊರಗರದ್ದು ಇನ್ನೊಂದು ‘ಜೈ ಭೀಮ್‌’ ಕಥೆ ಆಗದಿರಲಿ: ಎಚ್‌.ಸಿ.ಮಹದೇವಪ್ಪ

Prasthutha|

ಬೆಂಗಳೂರು: ಕರಾವಳಿಯ ಕೊರಗರದ್ದು ಇನ್ನೊಂದು “ಜೈ ಭೀಮ್” ಕಥೆ ಆಗದಿರಲಿ ಎಂದು ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಡಾ.ಎಚ್‌.ಸಿ.ಮಹದೇವಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.  

- Advertisement -

ಈ ಕುರಿತು ಫೇಸ್‌ಬುಕ್‌ ನಲ್ಲಿ ಬರೆದಿರುವ ಅವರು, ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕೋಟಾದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಡಿಜೆ ಸೌಂಡ್ ಬಳಸಿದ್ದಕ್ಕೆ ಅಲ್ಲಿನ ಕೊರಗ ಸಮುದಾಯದ ಮೇಲೆ ಪೊಲೀಸರು ಪ್ರಹಾರ ನಡೆಸಿದ್ದರು. ಇಂತಹ ಹೀನ ಕೃತ್ಯ ಎಸಗಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವುದಾಗಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಹೇಳಿದ್ದರು. ಆದರೆ ಅಚ್ಚರಿ ಎಂಬಂತೆ ಯಾವ ಕೊರಗರ ಮೇಲೆ ಹಲ್ಲೆ ನಡೆಸಲಾಗಿತ್ತೋ ಇದೀಗ ಅವರ ಮೇಲೆಯೇ ಪೊಲೀಸರು ಜಾಮೀನು ರಹಿತ ಪ್ರಕರಣವನ್ನು ದಾಖಲಿಸಿದ್ದು ಇದು ಮೇಲ್ನೋಟಕ್ಕೆ ಅತ್ಯಂತ ಸುಳ್ಳಿನ ಪ್ರಕರಣವಾಗಿ ಕಾಣುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಹಲ್ಲೆ ನಡೆದ ದಿನವೇ ತಮ್ಮ ಮೇಲಾದ ದಾಳಿಯ ಸುದ್ದಿಯ ಬಗ್ಗೆ ತಿಳಿಸದೇ ವಿಷಯವು ಸ್ವಲ್ಪ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಮೂಲ ವಿಷಯವನ್ನು ತಿರುಚುವಂತೆ ಬಹು ತಡವಾಗಿ ಪ್ರತಿಕ್ರಿಯೆ ನೀಡಿ ಕೇಸು ದಾಖಲಿಸಲಾಗಿದೆ. ಒಂದು ವೇಳೆ ಪೊಲೀಸರ ಮೇಲೆ ಕೊರಗರು ಹಲ್ಲೆ ನಡೆಸಿದ್ದೇ ನಿಜವಾದರೆ, ಈ ಸಂಗತಿಯನ್ನು ಪೊಲೀಸರು ಅಂದೇ ಏಕೆ ತಿಳಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

- Advertisement -

ಯಾವ ಕಾರಣಕ್ಕೆ ಸಚಿವರ ಹೇಳಿಕೆಗಳು ಪ್ರಕಟಗೊಂಡ ಮೇಲೆ ಈ ರೀತಿ ಹೇಳಿಕೆ ನೀಡಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂಬುದರ ಬಗ್ಗೆ ಸರಿಯಾದ ಸ್ಪಷ್ಟತೆ ಇಲ್ಲ. ಮೇಲಾಗಿ ಕೊರಗರು ಮೃದು ಸ್ವಭಾವದವರೂ ಆಗಿರುವುದು ಇಲ್ಲಿನ ಅನುಮಾನಗಳಿಗೆ ಮೂಲ ಕಾರಣ ಎಂದು ಎಂದು ಮಹದೇವಪ್ಪ ಹೇಳಿದ್ದಾರೆ.

ಇದೊಂದು ಸುಳ್ಳು ಪ್ರಕರಣ ಎಂದೇ ತನಗೆ ಅನಿಸುತ್ತಿದ್ದು ಸ್ಥಳೀಯ ಕಾಂಗ್ರೆಸ್ ನಾಯಕರು ಕೊರಗರ ಪರವಾಗಿ ನಿಲ್ಲಲು ಕೋರುತ್ತೇನೆ. ಇನ್ನು ಹಲ್ಲೆ ಯಾರ ಮೇಲೆ ನಡೆದಿದ್ದರೂ ಅದು ತಪ್ಪೇ. ಆದರೆ ಇದನ್ನೇ ಸುಳ್ಳು ಬಂಡವಾಳವಾಗಿಟ್ಟುಕೊಂಡು ಪ್ರಕರಣ ದಾಖಲಿಸುವ, ಅದರಲ್ಲೂ ಜಾಮೀನು ರಹಿತ ಪ್ರಕರಣ ದಾಖಲಿಸುವುದು ನಿಜಕ್ಕೂ ಅನ್ಯಾಯದ ಪರಮಾವಧಿ ಮತ್ತು ಕೆಳ ಸಮುದಾಯದ ಮೇಲೆ ನಡೆದ ದೌರ್ಜನ್ಯವೇ ಆಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, “ಕೊರಗರ ಕಥೆ ಇನ್ನೊಂದು ಜೈ ಭೀಮ್ ಸಿನಿಮಾದ ಪ್ರಕರಣದಂತೆ ಆಗದಿರಲಿ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.  



Join Whatsapp