ಸೆಂಚೂರಿಯನ್ ಟೆಸ್ಟ್: ಶಮಿ ದಾಳಿಗೆ ಆಫ್ರಿಕಾ ತತ್ತರ, ಟೀಮ್ ಇಂಡಿಯಾಗೆ 146 ರನ್’ಗಳ ಮುನ್ನಡೆ

Prasthutha|

ಸೆಂಚೂರಿಯನ್: ಸೂಪರ್‌’ಸ್ಪೋರ್ಟ್‌ ಪಾರ್ಕ್‌’ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಅಂತ್ಯಕ್ಕೆ  ಟೀಂ ಇಂಡಿಯಾ ದ್ವಿತೀಯ ಇನ್ನಿಂಗ್ಸ್’ನಲ್ಲಿ 1 ವಿಕೆಟ್ ನಷ್ಟದಲ್ಲಿ 16 ರನ್ ಗಳಿಸಿದ್ದು, ಒಟ್ಟಾರೆಯಾಗಿ 146 ರನ್’ಗಳ ಮುನ್ನಡೆ ಪಡೆದುಕೊಂಡಿದೆ.

- Advertisement -

3 ವಿಕೆಟ್‌ ನಷ್ಟದಲ್ಲಿ 272 ರನ್’ಗಳಿಂದ ಬ್ಯಾಟಿಂಗ್  ಆರಂಭಿಸಿದ್ದ ಕೊಹ್ಲಿ ಟೀಮ್, ದಿಢೀರ್ ಕುಸಿತಕ್ಕೆ ಒಳಗಾಗಿ 327ರನ್‌ಗಳಿಗೆ ಆಲೌಟ್‌ ಆಯಿತು. ಲುಂಗಿ ಎನ್‌’ಗಿಡಿ ಹಾಗೂ ಕಗಿಸೊ ರಬಾಡ ಬೌಲಿಂಗ್ ದಾಳಿಗೆ ಬೆದರಿದ ಭಾರತ ಕೇವಲ 49 ರನ್‌ಗಳ ಅಂತರದಲ್ಲಿ 7 ವಿಕೆಟ್ ಕಳೆದುಕೊಳ್ಳುವ ಮೂಲಕ ನಿರಾಸೆ ಅನುಭವಿಸಿತು. ಅಜೇಯ 122 ರನ್‌ ಕಲೆಹಾಕಿದ್ದ ಕೆ.ಎಲ್ ರಾಹುಲ್ ಮಂಗಳವಾರ ಕೇವಲ 1 ರನ್ ಸೇರಿಸುವಷ್ಟರಲ್ಲೇ ರಬಾಡ ಬೌಲಿಂಗ್‌ನಲ್ಲಿ ಹಾಗೂ 48 ರನ್‌ಗಳಿಸಿದ್ದ ರಹಾನೆ ಲುಂಗಿ ಎನ್‌’ಗಿಡಿ ಬೌಲಿಂಗ್‌’ನಲ್ಲಿ ವಿಕೆಟ್ ಒಪ್ಪಿಸಿದ್ರು.

ಮುಹಮ್ಮದ್ ಶಮಿ ಬೌಲಿಂಗ್ ದಾಳಿಗೆ ಬೆದರಿದ ದಕ್ಷಿಣ ಆಫ್ರಿಕಾ: 197 ರನ್’ಗಳಿಗೆ ಸರ್ವಪತನ

- Advertisement -

ಭಾರತದ ಮೊದಲ ಇನ್ನಿಂಗ್ಸ್’ನಲ್ಲಿ ಗಳಿಸಿದ್ದ 327ರನ್‌ ಗುರಿ ದಾಟಲು ಬ್ಯಾಟಿಂಗ್’ಗೆ ಇಳಿದ ಆಫ್ರಿಕಾ ತಂಡ, ಅನುಭವಿ ವೇಗಿ ಮುಹಮ್ಮದ್ ಶಮಿ ಮಾರಕ ಬೌಲಿಂಗ್ ದಾಳಿಯೆದುರು ತತ್ತರಿಸಿ ಕೇವಲ 197 ರನ್’ಗಳಿಗೆ ಆಲೌಟ್ ಆಯಿತು. ಹರಿಣಗಳ ನಾಯಕ ಎಲ್ಗಾರ್ ಕೇವಲ 1 ರನ್’ಗಳಿಸಿ ಮರಳಿದರೆ ಮತ್ತೋರ್ವ ಆರಂಭಿಕ ಮಾರ್ಕಮ್ 13 ರನ್’ಗಳಿಸಲಷ್ಟೇ ಶಕ್ತರಾದರು. ತೆಂಬ ಬವುಮಾ ಆಕರ್ಷಕ ಅರ್ಧ ಶತಕ ಗಳಿಸಿದರೆ, ಕೀಪರ್ ಕ್ವಿಂಟನ್ ಡಿಕಾಕ್ 34 ರನ್ ಹಾಗೂ ಕಾಗಿಸೋ ರಬಾಡ 25 ರನ್ ಗಳಿಸಿದರು.

ಹರಿಣಗಳ ಬ್ಯಾಟಿಂಗ್ ಬೆನ್ನೆಲುಬನ್ನು ಮುರಿದ ಅನುಭವಿ ವೇಗಿ ಮುಹಮ್ಮದ್ ಶಮಿ, 16 ಓವರ್’ಗಳ ದಾಳಿಯಲ್ಲಿ 44 ರನ್’ನೀಡಿ 5 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಉಳಿದಂತೆ ಬುಮ್ರಾ ಮತ್ತು ಶಾರ್ದೂಲ್ ತಲಾ ಎರಡು ವಿಕೆಟ್ ಹಾಗೂ ಸಿರಾಜ್ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು

Join Whatsapp