ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸರಕಾರ ರಚನೆಯಾಗಲು ಕೇಂದ್ರ ಸಚಿವ ರಾಮದಾಸ್ ಅಠಾವಳೆ ‘ಸಿಎಂ ಸೂತ್ರ’ವನ್ನು ಮುಂದಿಟ್ಟಿದ್ದಾರೆ. ಮುಂದಿನ ಚುನಾವಣೆಯ ಬಳಿಕ ಮುಖ್ಯಮಂತ್ರಿ ಪಟ್ಟವನ್ನು ಪೂರ್ಣಾವಧಿಗೆ ಶಿವಸೇನೆಯ ಉದ್ಧವ್ ಠಾಕ್ರೆಯವರಿಗೆ ಬಿಟ್ಟುಕೊಟ್ಟರೆ ಮಹಾರಾಷ್ಟ್ರದಲ್ಲಿ ಸುಲಭದಲ್ಲಿ ಶಿವಸೇನೆ-ಬಿಜೆಪಿ ಸರಕಾರ ರಚನೆಯಾಗಲಿದೆ. ಮಾಜಿ ದೋಸ್ತಿಗಳು ಮತ್ತೆ ಸರಕಾರ ರಚಿಸುವುದು ‘ದೊಡ್ಡ ವಿಷಯವೇ ಅಲ್ಲ’ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಮುಖಂಡರೂ ಆಗಿರುವ ರಾಮದಾಸ್ ಅಠಾವಳೆ, ಮುಖ್ಯಮಂತ್ರಿ ಪಟ್ಟವನ್ನು ಪೂರ್ಣಾವಧಿಗೆ ಶಿವಸೇನೆಯ ಉದ್ಧವ್ ಠಾಕ್ರೆಯವರಿಗೆ ಬಿಟ್ಟುಕೊಡುವ ವಿಚಾರವನ್ನು ನಾನು ಸದ್ಯದಲ್ಲೇ ಬಿಜೆಪಿ ನಾಯಕರ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ಕಳೆದ ಶಿವಸೇನೆ-ಬಿಜೆಪಿ ಸರಕಾರದಲ್ಲಿ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವು ಮೈತ್ರಿಕೂಟದ ಭಾಗವಾಗಿತ್ತು.
‘ಗೋ ಮಹಾ ವಿಕಾಸ್ ಅಘಾಡಿ ಗೋ’
ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಅಠಾವಳೆ, “ಈ ಮೂರು ಚಕ್ರಗಳ ಸರ್ಕಾರದಲ್ಲಿ ಮೂರು ಪಕ್ಷಗಳು ಪರಸ್ಪರ ಕಿತ್ತಾಡಿಕೊಳ್ಳುತ್ತಿದೆ. ಈ ಸರ್ಕಾರದಿಂದಾಗಿ ರೈತರಿಗೆ, ದಲಿತರಿಗೆ ಯಾವುದೇ ಸಹಾಯವೂ ದೊರೆಯುತ್ತಿಲ್ಲ. ಬಜೆಟ್‌ನಲ್ಲಿ ದಲಿತರಿಗೆ ಯಾವುದೇ ಘೋಷಣೆಯನ್ನು ಮಾಡಿಲ್ಲ,” ಎಂದು ಆರೋಪ ಮಾಡಿದ್ದಾರೆ. ಈ ಹಿಂದೆ ‘ಗೋ ಕೊರೊನಾ ಕೊರೊನಾ ಗೋ’ ಹಾಗೂ ‘ನೋ ಕೊರೊನಾ ಕೊರೊನಾ ನೋ’ ಎಂಬ ಘೋಷಣೆಗಳ ಮೂಲಕ ‘ಸುದ್ದಿ’ಯಾಗಿದ್ದ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಈಗ ‘ಗೋ ಮಹಾ ವಿಕಾಸ್ ಅಘಾಡಿ ಗೋ’ ಎಂಬ ಹೊಸ ಘೋಷಣೆಯನ್ನು ಕೂಗಿದ್ದಾರೆ.