ಪ್ರಧಾನಿ ಮೇಲಿನ ನಂಬಿಕೆ ಕಡಿಮೆಯಾಗಿದೆ, ನಾನು ರಾಜಕೀಯೇತರ ವ್ಯಕ್ತಿ: ಪಶ್ಚಿಮ ಬಂಗಾಳ ಎಜಿ ಮುಖರ್ಜಿ

Prasthutha|

ಕೋಲ್ಕತ್ತಾ: ಇತ್ತೀಚೆಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಪ್ರಕ್ಷುಬ್ಧತೆಯನ್ನು ಕಂಡ ಪಶ್ಚಿಮ ಬಂಗಾಳಕ್ಕೆ ಎಸ್‌ ಎನ್ ಮುಖರ್ಜಿ ಅವರನ್ನು ಅಡ್ವೊಕೇಟ್ ಜನರಲ್ (ಎಜಿ) ಆಗಿ ಕೆಲ ದಿನಗಳ ಹಿಂದೆ ನೇಮಕಗೊಂಡಿದ್ದು ಅನೇಕರ ಹುಬ್ಬೇರುವಂತೆ ಮಾಡಿತು. ಇದು ಇತರರಿಗಷ್ಟೇ ಅಲ್ಲದೆ ಖುದ್ದು ತನಗೆ ಕೂಡ ಅಚ್ಚರಿ ತಂದಿತ್ತು ಎಂಬುದನ್ನು ಹಿರಿಯ ನ್ಯಾಯವಾದಿ ಮುಖರ್ಜಿ ಒಪ್ಪಿಕೊಳ್ಳುತ್ತಾರೆ.

- Advertisement -

ಬಿಜೆಪಿ ಹಿನ್ನೆಲೆಯ ಕುಟುಂಬದಿಂದ ಬಂದಿರುವ ಎಸ್‌ ಎನ್ ಮುಖರ್ಜಿ ಅವರು ಈಗ ತೃಣಮೂಲ ಕಾಂಗ್ರೆಸ್ ಸರ್ಕಾರದ ವ್ಯಾಜ್ಯಗಳನ್ನು ನ್ಯಾಯಾಲಯದ ಮುಂದೆ ಪ್ರತಿಪಾದಿಸುತ್ತಿದ್ದು ತಾವು ರಾಜಕೀಯೇತರ ವ್ಯಕ್ತಿ ಎಂದು ಸಮರ್ಥಿಸಿಕೊಂಡಿದ್ದಾರೆ.

ಕುತೂಹಲಕರ ಸಂಗತಿ ಎಂದರೆ ಎಜಿ ಆಗಿ ನೇಮಕಗೊಳ್ಳುವ ಮೊದಲು ಮುಖರ್ಜಿ ಅವರು ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸಲ್ಲಿಸಲಾಗಿದ್ದ ಚುನಾವಣಾ ಅರ್ಜಿಯಲ್ಲಿ ಮಮತಾ ಬ್ಯಾನರ್ಜಿ ಪರವಾಗಿ ವಾದ ಮಂಡಿಸಿದ್ದರು. ನ್ಯಾಯಮೂರ್ತಿ ಕೌಶಿಕ್ ಚಂದಾ ಹೈಕೋರ್ಟ್‌ಗೆ ಪದೋನ್ನತಿ ಪಡೆಯುವ ಮುನ್ನ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದು ಅವರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಮುಖರ್ಜಿ ವಾದಿಸಿದ್ದರು.

- Advertisement -

ಇತ್ತೀಚೆಗೆ ಮುಖರ್ಜಿ ಅವರನ್ನು ಸಂದರ್ಶಿಸಿದ್ದು ಈ ವೇಳೆ ಅವರು ನ್ಯಾ. ಕೌಶಿಕ್‌ ಸಂಗತಿಯನ್ನು ಪ್ರಸ್ತಾಪಿಸಿದ್ದರು. ನ್ಯಾಯಾಧೀಶರುಗಳು ಪೂರ್ವಾಶ್ರಮದಲ್ಲಿ ರಾಜಕೀಯ ನಂಟು ಹೊಂದಿದ್ದರೆ ಅಂತಹ ಸೂಕ್ಷ್ಮ ಪ್ರಕರಣಗಳ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಅಭಿಪ್ರಾಯ ಹಂಚಿಕೊಂಡರು. ಹದಗೆಡುತ್ತಿರುವ ಕೇಂದ್ರ-ರಾಜ್ಯ ಸಂಬಂಧಗಳು, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿರುವ ನಂಬಿಕೆ ಇತ್ಯಾದಿ ವಿಚಾರಗಳ ಕುರಿತಂತೆಯೂ ಅವರು ಮನಬಿಚ್ಚಿ ಮಾತನಾಡಿದರು. ಸಂದರ್ಶನದಲ್ಲಿ ಅವರು ವಿವಿಧ ವಿಷಯಗಳ ಬಗ್ಗೆ ವ್ಯಕ್ತಪಡಿಸಿದ ಅಭಿಪ್ರಾಯಗಳ ಆಯ್ದ ಅಂಶಗಳನ್ನು ಇಲ್ಲಿ ನೀಡಲಾಗಿದೆ:

ಕೇಂದ್ರ-ರಾಜ್ಯ ಸಂಬಂಧಗಳು ಮತ್ತು ಪ್ರಧಾನಿ

“ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಮಾತ್ರ ಬೇರೆ ಬೇರೆ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯದ ಮೇಲೆ ಒತ್ತಡ ಹೇರಲು ಸಂಸ್ಥೆಗಳನ್ನು ಬಳಸಲಿಲ್ಲ.”

“ವಾಜಪೇಯಿ ಅವರ ಮೇಲೆ ನಂಬಿಕೆ ಇತ್ತು. ಪ್ರತಿಪಕ್ಷಗಳು ಕೂಡ ನಂಬಿಕೆ ಇರಿಸಿಕೊಂಡಿದ್ದವು. ನಾವು ಅವರನ್ನು ಮತ್ತೆ ಅಧಿಕಾರಕ್ಕೆ ತರದೇ ಹೋದದ್ದು ದುರದೃಷ್ಟಕರ”

“ಈಗಿನ ಪ್ರಧಾನಿ ಮೇಲಿನ ನಂಬಿಕೆ ನಿರಂತರವಾಗಿ ಕಡಿಮೆಯಾಗುತ್ತಿದೆ. ಕೇಂದ್ರದಲ್ಲಿ ಆಳ್ವಿಕೆ ನಡೆಸುತ್ತಿರುವ ಪಕ್ಷವು ಅಧಿಕಾರದಲ್ಲಿ ಇಲ್ಲದ ರಾಜ್ಯಗಳು ಕೇಂದ್ರದ ಮೇಲೆ ನಂಬಿಕೆ ಇಟ್ಟಿವೆ ಎಂದು ನನಗೆ ಅನ್ನಿಸುವುದಿಲ್ಲ”

ಮಾಸ್ಟರ್‌ ಆಫ್‌ ರೋಸ್ಟರ್‌ ಅಧಿಕಾರದ ಬಗ್ಗೆ

“(ಯಾವುದೇ ಮುಖ್ಯ ನ್ಯಾಯಮೂರ್ತಿಗಳು) ಮಾಸ್ಟರ್ ಆಫ್ ರೋಸ್ಟರ್ ಅಧಿಕಾರವನ್ನು ಮರುಪರಿಶೀಲನೆಯ ಅಗತ್ಯವಿರುವಷ್ಟು ದುರುಪಯೋಗಪಡಿಸಿಕೊಂಡಿಲ್ಲ.”

ಕಾರ್ಪೊರೇಟ್ ಕಾನೂನು ಹೋರಾಟದ ಕುರಿತು

“ಕಾರ್ಪೊರೇಟ್ ಕಾನೂನಿನ ಪ್ರಮುಖ ನ್ಯಾಯವ್ಯಾಪ್ತಿ, ಅಂದರೆ ಷೇರುದಾರರ ಚಟುವಟಿಕೆ. ಅದು ಇಂದು ಸತ್ತಿದೆ. ಈಗ ಅದು ದಿವಾಳಿತನದ ಅರ್ಜಿಗಳಿಗೆ ದಾರಿ ಮಾಡಿಕೊಟ್ಟಿದೆ.”

ಯುವ ವಕೀಲರಿಗೆ ಸಂದೇಶ

ವಕೀಲಿ ವೃತ್ತಿಯಲ್ಲಿ ಏಳಿಗೆಗೆ ನಾಲ್ಕು ಗುಣಗಳು ನಿರ್ಣಾಯಕವಾಗಿವೆ – ನಮ್ರತೆ, ನ್ಯಾಯಾಲಯಕ್ಕೆ ಪ್ರಾಮಾಣಿಕವಾಗಿರುವುದು, ಕಠಿಣ ಪರಿಶ್ರಮ ಹಾಗೂ ಎದುರಾಳಿಯನ್ನು ಗೌರವಿಸುವುದು.

( ಕೃಪೆ: ಬಾರ್ ಆ್ಯಂಡ್ ಬೆಂಚ್ )



Join Whatsapp