ನವದೆಹಲಿ: ಶ್ರೀಮಂತ ಭಾರತೀಯ ಪರಂಪರೆಯನ್ನು ವಿಭಜನಕಾರಿ ಶಕ್ತಿಗಳು ನಾಶಗೊಳಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಮೂಕಪ್ರೇಕ್ಷಕವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಸ್ಥೆ ಸೋನಿಯಾ ಗಾಂಧಿ ಗುಡುಗಿದ್ದಾರೆ.
ದ್ವೇಷ ಮತ್ತು ಪೂರ್ವ ಗ್ರಹದಲ್ಲಿ ನಂಬಿಕೆಯಿರಿಸಿರುವ ವಿಭಜಕ ಸಿದ್ಧಾಂತವನ್ನು ಬಲಿಷ್ಠ ಭಾರತವನ್ನು ಅಭಿವೃದ್ಧಿಪಡಿಸಲು ಹಲವು ವರ್ಷಗಳಿಂದ ಪಕ್ಷದ ನಾಯಕರು ಹಾಕಿದ ದೃಢವಾದ ಅಡಿಪಾಯವನ್ನು ದುರ್ಬಲಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಪಕ್ಷದ 137 ನೇ ಸಂಸ್ಥಾಪನಾ ದಿನದ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು “ಇತಿಹಾಸವನ್ನು ತಿರುಚಲಾಗುತ್ತಿದೆ ಮತ್ತು ದೇಶದ ಸಂಸ್ಕೃತಿಯನ್ನು ನಾಶಗೊಳಿಸಲು ಅಸಹ್ಯಕರ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಈ ಎಲ್ಲಾ ಸಂದರ್ಭದಲ್ಲಿ ಕಾಂಗ್ರೆಸ್ ಮೂಕ ಪ್ರೇಕ್ಷಕರಾಗಿ ಉಳಿಯುವುದಿಲ್ಲ ಮತ್ತು ದೇಶದ ಶ್ರೀಮಂತ ಪರಂಪರೆಯನ್ನು ನಾಶಗೊಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದರು.
ಹಿಂದುತ್ವದ ಅಜೆಂಡಾವನ್ನು ಪ್ರತಿಪಾದಿಸುವ ಒಂದು ಗುಂಪು ಮಹಾತ್ಮ ಗಾಂಧಿಯನ್ನು ನಿಂದಿಸುತ್ತಿರುವ ಮತ್ತು ನಾಥುರಾಮ್ ಗೋಡ್ಸೆಯನ್ನು ಶ್ಲಾಘಿಸುತ್ತಿರುವ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.