ಮೂರನೇ ಪಂದ್ಯದಲ್ಲೂ ಇಂಗ್ಲೆಂಡ್’ಗೆ ಹೀನಾಯ ಸೋಲು; ಆ್ಯಷಸ್ ಸರಣಿ ಗೆದ್ದ ಆಸ್ಟ್ರೇಲಿಯಾ

Prasthutha|

ಮೆಲ್ಬೋರ್ನ್; ಚೊಚ್ಚಲ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್’ನಲ್ಲಿ ಕೇವಲ 7ರನ್ ನೀಡಿ 6 ವಿಕೆಟ್ ಪಡೆದ ಆಸ್ಟ್ರೇಲಿಯಾದ ವೇಗಿ ಸ್ಕಾಟ್ ಬೊಲ್ಯಾಂಡ್ ಬೌಲಿಂಗ್ ದಾಳಿಗೆ ಬೆದರಿದ ಇಂಗ್ಲೆಂಡ್ ತಂಡ, ಆ್ಯಷಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಇನ್ನಿಂಗ್ಸ್ ಹಾಗೂ 14 ರನ್ ಅಂತರದಿಂದ ಹೀನಾಯವಾಗಿ ಸೋಲು ಕಂಡಿತು.

- Advertisement -

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಜೋ ರೂಟ್ ನಾಯಕತ್ವದ ಆಂಗ್ಲ ಪಡೆ ಮೊದಲ ಇನಿಂಗ್ಸ್’ನಲ್ಲಿ 185 ರನ್’ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ್ದ ಪ್ಯಾಟ್ ಕಮಿನ್ಸ್ ಬಳಗವು, 267 ರನ್’ಗಳಿಸುವಷ್ಟರಲ್ಲಿ ಇನ್ನಿಂಗ್ಸ್ ಮುಗಿಸಿತ್ತಾದರೂ 82 ರನ್’ಗಳ ಮುನ್ನಡೆ ಪಡೆದುಕೊಂಡಿತ್ತು.

ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್, ಆಸ್ಟ್ರೇಲಿಯಾ ಪರ ಪದಾರ್ಪಣೆ ಪಂದ್ಯವಾಡಿದ ಸ್ಕಾಟ್ ಬೊಲ್ಯಾಂಡ್ ಬೌಲಿಂಗ್ ದಾಳಿಯನ್ನು ಎದುರಿಸಲಾಗದೆ ಪೆವಿಲಿಯನ್ ಪರೇಡ್ ನಡೆಸಿ ಕೇವಲ 68 ರನ್’ಗಳಿಸುವಷ್ಟರಲ್ಲೇ ಆಲೌಟ್ ಆಯಿತು.

- Advertisement -

 ಮೊದಲ ಇನಿಂಗ್ಸ್’ನಲ್ಲಿ 48 ರನ್ ನೀಡಿ 1 ವಿಕೆಟ್ ಪಡೆದುಕೊಂಡಿದ್ದ ಸ್ಕಾಟ್, 2ನೇ ಇನ್ನಿಂಗ್ಸ್’ನಲ್ಲಿ ಕೇವಲ 7 ರನ್ ನೀಡಿ ಪ್ರಮುಖ ಆರು ಆಂಗ್ಲ ಬ್ಯಾಟರ್’ಗಳಿಗೆ ಪೆವಿಲಿಯನ್ ದಾರಿ ತೋರಿದರು. ಇದರೊಂದಿಗೆ ಪ್ರತಿಷ್ಠಿತ ಆ್ಯಷಸ್ ಟ್ರೋಫಿ ಸರಣಿಯ 3ನೇ ಟೆಸ್ಟ್ ಕೇವಲ ಮೂರೇ ದಿನದಲ್ಲಿ ಮುಕ್ತಾಯ ಕಂಡಿತು.

ನಾಯಕ ಜೋ ರೂಟ್ ಮೊದಲ ಇನಿಂಗ್ಸ್’ನಲ್ಲಿ 50 ರನ್ ಗಳಿಸಿದ್ದೇ, ಪಂದ್ಯದಲ್ಲಿ ಇಂಗ್ಲೆಂಡ್ ಪರ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ ಮೊದಲ ಹಾಗೂ ಎರಡನೇ ಇನ್ನಿಂಗ್ಸ್’‌ನಲ್ಲಿ ತಲಾ 3 ವಿಕೆಟ್, ಮಿಚೆಲ್ ಸ್ಟಾರ್ಕ್ ಮೊದಲ ಇನ್ನಿಂಗ್ಸ್‌’ನಲ್ಲಿ 2, ಎರಡನೇ ಇನ್ನಿಂಗ್ಸ್’‌ನಲ್ಲಿ 3 ವಿಕೆಟ್, ಹಾಗೂ ಸ್ಕಾಟ್ ಬೊಲ್ಯಾಂಡ್ ಒಟ್ಟು 7 ವಿಕೆಟ್ ವಿಕೆಟ್ ಪಡೆದರು.

ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಇಂಗ್ಲೆಂಡ್ ಹೀನಾಯವಾಗಿ ಸೋಲು ಕಂಡಿತ್ತು. ಆಸ್ಟ್ರೇಲಿಯಾ ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ 3–0 ಮುನ್ನಡೆ ಸಾಧಿಸಿದೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News



Join Whatsapp