ಬೆಂಗಳೂರು: ಹಿಂದೂ ಪುನರುಜ್ಜೀವನ ಮತ್ತು “ಭಾರತದಲ್ಲಿ ಈ ಹಿಂದೆ ಮತಾಂತರಗೊಂಡ ಎಲ್ಲರನ್ನೂ “ಹಿಂದೂ ತೆಕ್ಕೆಗೆ ಮರಳಿ ತರುವ” ಬಗ್ಗೆ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ಹೇಳಿಕೆಗಳನ್ನು “ಬೇಷರತ್ತಾಗಿ ಹಿಂಪಡೆದುಕೊಂಡಿದ್ದೇನೆ” ಎಂದು ಹೇಳಿದ್ದಾರೆ.
ಸೂರ್ಯ ಅವರ ಹೇಳಿಕೆಯ ವೀಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
‘ಎರಡು ದಿನಗಳ ಹಿಂದೆ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಹಿಂದೂ ಪುನರುಜ್ಜೀವನ’ ವಿಷಯದ ಬಗ್ಗೆ ಮಾತನಾಡಿದ್ದೆ. ನನ್ನ ಭಾಷಣದ ಕೆಲವು ಹೇಳಿಕೆಗಳು ವಿವಾದ ಸೃಷ್ಟಿಸಿರುವುದು ವಿಷಾದನೀಯ. ಆದ್ದರಿಂದ ನಾನು ಬೇಷರತ್ತಾಗಿ ಹೇಳಿಕೆಗಳನ್ನು ಹಿಂಪಡೆದುಕೊಳ್ಳುತ್ತೇನೆ” ಎಂದು ತೇಜಸ್ವಿ ಸೂರ್ಯ ಸೋಮವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.
“ಮಾತೃ ಧರ್ಮ”ವನ್ನು ತೊರೆದವರನ್ನು ಆದ್ಯತೆಯ ಮೇಲೆ ಮರಳಿ ಕರೆತರಬೇಕು ಮತ್ತು ಇದೇ ನಮ್ಮ ಮುಂದಿರುವ “ಏಕೈಕ ಪರಿಹಾರ”. ಪಾಕಿಸ್ತಾನದಲ್ಲಿರುವ ಮುಸ್ಲಿಮರನ್ನು ಕೂಡ ಹಿಂದೂ ಧರ್ಮಕ್ಕೆ ಕರೆತರಬೇಕಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದರು.
“ನಾವು ಈ ದೇಶದಲ್ಲಿ ರಾಮಮಂದಿರವನ್ನು ನಿರ್ಮಿಸಿದ್ದೇವೆ. ಜಮ್ಮು ಮತ್ತು ಕಾಶ್ಮೀರದ 370 ನೇ ವಿಧಿಯನ್ನು ತೆಗೆದುಹಾಕಲಾಗಿದೆ. ನಾವು ಪಾಕಿಸ್ತಾನದ ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಪರಿವರ್ತಿಸಬೇಕು. ಘರ್ ವಾಪಸಿಗೆ ಆದ್ಯತೆ ನೀಡಬೇಕು. ಅಖಂಡ ಭಾರತ ಕಲ್ಪನೆಯಲ್ಲಿ ಪಾಕಿಸ್ತಾನವೂ ಸೇರಿದೆ. ಈ ನಿಟ್ಟಿನಲ್ಲಿ ಮಠಗಳು ಮತ್ತು ದೇವಸ್ಥಾನಗಳು ಮುಂದಾಳತ್ವ ವಹಿಸಬೇಕು ಎಂದು ಸೂರ್ಯ ಹೇಳಿಕೆ ನೀಡಿದ್ದರು.