ಹಾಸನ: ನಗರದ ಹೊರವಲಯದ ಕೃಷ್ಣ ನಗರದಲ್ಲಿ ಸಬ್ ಇನ್ ಸ್ಪೆಕ್ಟರ್ ಮೇಲೆ ಚೂರಿ ಇರಿದು ಗಾಯಗೊಳಿಸಿದ ರೌಡಿ ಶೀಟರ್ ಓರ್ವನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಘಟನೆ ವರದಿಯಾಗಿದೆ.
ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಬಸವರಾಜ್ ಮೇಲೆ ಆರೋಪಿ ಸುನಿಲ್ ಚಾಕುವಿನಿಂದ ಹಲ್ಲೆ ನಡೆಸಿದ್ದು, ಗುಂಡೇಟಿನಿಂದ ಗಾಯಗೊಂಡ ಆತನನ್ನು ಹಿಮ್ಸ್ ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಗಾಯಗೊಂಡ ಪಿ.ಎಸ್.ಐ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅರೆಕಲ್ಲು ಹೊಸಳ್ಳಿಯವನಾದ ಆರೋಪಿ ಸುನಿಲ್ ವಿರುದ್ಧ ಮಾರಣಾಂತಿಕ ಹಲ್ಲೆ ಸೇರಿ 7 ಪ್ರಕರಣಗಳು ದಾಖಲಾಗಿವೆ.
ಸುನಿಲ್ ಮತ್ತು ಆತನ ಸಹಚರರು ಅ.23 ರಂದು ಮೂರು ಮಂದಿಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದರು. ಪ್ರಕರಣದಲ್ಲಿ ಓರ್ವನನ್ನು ಕೆಲ ದಿನಗಳ ಹಿಂದೆಯೇ ಬಂಧಿಸಲಾಗಿತ್ತು. ಪ್ರಕರಣದ ತನಿಖೆ ನಡೆಸುತ್ತಿದ್ದ ಪಿ.ಎಸ್.ಐ ಬಸವರಾಜ್, ತನ್ನ ಐದು ಮಂದಿ ಸಹಚರರೊಂದಿಗೆ ಸುನಿಲ್ ಕೃಷ್ಣ ನಗರದ ಬಳಿ ಇರುವ ಮಾಹಿತಿ ಪಡೆದು ದಾಳಿ ನಡೆಸಿದ್ದರು.
ಮದ್ಯ ಸೇವಿಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲು ಮುಂದಾದಾಗ ಮೂವರು ಆರೋಪಿಗಳು ಪರಾರಿಯಾದರು. ಈ ಸಂದರ್ಭದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಹೇಳಲಾಗಿದೆ. ಪ್ರಮುಖ ಆರೋಪಿ ಸುನಿಲ್ ತಪ್ಪಿಸಿಕೊಳ್ಳುವ ಸಲುವಾಗಿ ಪಿ.ಎಸ್.ಐ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಅವರ ಹೊಟ್ಟೆ ಮತ್ತು ಎಡಗೈಯನ್ನು ಗಾಯಗೊಳಿಸಿದ್ದ. ಈ ಸಂದರ್ಭ ಗ್ರಾಮಾಂತರ ವೃತ್ತ ನಿರೀಕ್ಷಕ ಪಿ.ಸುರೇಶ್ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ತಪ್ಪಿಸಿಕೊಂಡ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ.