►► 2021ರ ಮಾರ್ಚ್ 14ರಿಂದ ಜಾರಿ
ರಿಯಾದ್: ರಾಷ್ಟ್ರೀಯ ಪರಿವರ್ತನೆ ಕಾರ್ಯಕ್ರಮ (ಎನ್.ಟಿ.ಪಿ) ಅಡಿಯಲ್ಲಿ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯ (ಎಂ.ಎಚ್.ಆರ್.ಎಸ್.ಡಿ)ವು ಬುಧವಾರದಂದು ಕಾರ್ಮಿಕ ಸುಧಾರಣಾ ಕ್ರಮ (ಎಲ್.ಆರ್.ಐ)ಗಳನ್ನು ಬಿಡುಗಡೆಗೊಳಿಸಿದೆ. ಇದು ಆಕರ್ಷಕ ಉದ್ಯೋಗ ಮಾರುಕಟ್ಟೆ ಸ್ಥಾಪನೆ, ಕಾರ್ಮಿಕ ಸಾಮರ್ಥ್ಯಗಳ ಸಬಲೀಕರಣ ಹಾಗೂ ಅಭಿವೃದ್ಧಿ ಮತ್ತು ಸೌದಿ ಅರೇಬಿಯಾದಲ್ಲಿ ಉದ್ಯೋಗದ ವಾತಾವರಣವನ್ನು ಅಭಿವೃದ್ಧಿಗೊಳಿಸುವ ಗುರಿಯನ್ನು ಹೊಂದಿದೆ.
ಈ ಕ್ರಮವು ಉದ್ಯೋಗ ಚಲನಶೀಲತೆಯನ್ನು ಅನುಮತಿಸುತ್ತದೆ ಹಾಗೂ ಎಕ್ಸಿಟ್ ಮತ್ತು ರಿ ಎಂಟ್ರಿ ವಿಸಾಗಳ ಪ್ರಕಟನೆಯನ್ನು ಕ್ರಮಪಡಿಸುತ್ತದೆ. ಇದು ಖಾಸಗಿ ವಲಯದಲ್ಲಿರುವ ಎಲ್ಲಾ ಅನಿವಾಸಿ ಕಾರ್ಮಿಕರಿಗೆ ಅನ್ವಯವಾಗುತ್ತದೆ. ಎರಡೂ ಕಡೆಯ ಒಪ್ಪಂದದ ಸಂಬಂಧದ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿ ಕೆಲವು ನಿಶ್ಚಿತ ನಿಯಂತ್ರಣಾ ಕ್ರಮಗಳನ್ನು ಇದು ಒಳಗೊಂಡಿರುತ್ತದೆ. ಈ ಸುಧಾರಣೆಯು 2021ರ ಮಾರ್ಚ್ 14ರಿಂದ ಜಾರಿಗೆ ಬರಲಿದೆ.
ಈ ಸುಧಾರಣಾ ಕ್ರಮ ದಡಿ ನೌಕರರ ಚಲನಶೀಲತೆಯ ಅವಕಾಶದ ಪ್ರಕಾರ ಉದ್ಯೋಗ ಒಪ್ಪಂದವು ಮುಗಿಯುವುದರೊಂದಿಗೆ ಅನಿವಾಸಿ ಉದ್ಯೋಗಿಗಳು ಮಾಲೀಕನ ಒಪ್ಪಿಗೆಯಿಲ್ಲದೆಯೇ ಮಾಲೀಕನನ್ನು (ಉದ್ಯೋಗ) ಬದಲಾಯಿಸಿಕೊಳ್ಳಬಹುದಾಗಿದೆ. ಆದರೆ ಇದು ಅನ್ವಯಗೊಳ್ಳಲು ಕೆಲವು ನಿಬಂಧನೆಗಳೂ ಇವೆ. ಗುತ್ತಿಗೆಯು ಕೊನೆಗೊಳ್ಳುವುದಕ್ಕೆ ಮುಂಚೆ ನೊಟೀಸ್ ಅವಧಿ ಮತ್ತು ಕೆಲವು ನಿರ್ದಿಷ್ಟ ಕ್ರಮಗಳು ನಿಬಂಧನೆಯಲ್ಲಿ ಒಳಗೊಂಡಿದೆ.
ಎಕ್ಸಿಟ್ ಮತ್ತು ರಿ ಎಂಟ್ರಿ ವಿಸಾ ಸುಧಾರಣೆಗಳು ಮಾಲೀಕನ ಅನುಮೋದನೆಯಿಲ್ಲದೆಯೇ ಅನಿವಾಸಿ ಉದ್ಯೋಗಿಗಳು ಸೌದಿ ಅರೇಬಿಯಾದಿಂದ ಹೊರ ಹೋಗಲು ಅನುಮತಿಸುತ್ತದೆ; ಆದರೆ ವಿದ್ಯುನ್ಮಾನ ಹಾದಿಯ ಮುಖಾಂತರ ಮಾಲೀಕರು ಅವರ ನಿರ್ಗಮನದ ಕುರಿತ ಸೂಚನೆಯನ್ನು ಪಡೆಯಲಿದ್ದಾರೆ.
ಫೈನಲ್ ಎಕ್ಸಿಟ್ ವಿಸಾ ಸುಧಾರಣೆಯು ಉದ್ಯೋಗ ಗುತ್ತಿಗೆಯು ಮುಗಿದ ಬಳಿಕ ಮಾಲೀಕನ ಅನುಮತಿಯಿಲ್ಲದೆ ಸೌದಿ ಅರೇಬಿಯಾದಿಂದ ಹೊರಹೋಗಲು ಅನಿವಾಸಿಗಳಿಗೆ ಅನುಮತಿಸುತ್ತದೆ; ಅವರ ನಿರ್ಗಮನದ ಕುರಿತು ವಿದ್ಯುನ್ಮಾನ ಸಂದೇಶವು ಮಾಲೀಕನಿಗೆ ದೊರೆಯಲಿದೆ.
ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಸ್ಮಾರ್ಟ್ ಫೋನ್ ಅಪ್ಲಿಕೇಶನ್ Absher ಮತ್ತು Qiwa ಮೂಲಕ ಸಾರ್ವಜನಿಕರಿಗೆ ಈ ಮೂರು ಸೇವೆಗಳು ಲಭ್ಯವಾಗಲಿದೆ.