ರಿಯಾಧ್ : ಕೋವಿಡ್ – 19 ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಹೇರಲಾಗಿದ್ದ ಸಂದರ್ಭ ತಮ್ಮ ಜೀವದ ಹಂಗು ತೊರೆದು, ಜನಸೇವೆ ಮಾಡಿದ ‘ಕೋವಿಡ್ ವಾರಿಯರ್ಸ್’ಗೆ ಇಂಡಿಯನ್ ಸೋಶಿಯಲ್ ಫೋರಂ, ಕೇಂದ್ರ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ವೇಳೆ ಸಾಧಕರನ್ನು ಸನ್ಮಾನಿಸಿ ಮಾತನಾಡಿದ, ಫೋರಂನ ಅಧ್ಯಕ್ಷರಾದ ಹಾರಿಸ್ ಮಂಗಳೂರು ಅವರು ಕೋವಿಡ್ ವಾರಿಯರ್ಸ್ ಸೇವೆಯನ್ನು ಪ್ರಶಂಸಿದರು. ಲಾಕ್ ಡೌನ್ ಸಂದರ್ಭ ಅನುಭವಿಸಿದ ಕೆಲವೊಂದು ಕಷ್ಟಕರ ಸಂದರ್ಭಗಳು, ಇಂಡಿಯನ್ ಸೋಶಿಯಲ್ ಫೋರಂ ಸದಸ್ಯರು ಅದನ್ನು ನಿಭಾಯಿಸಿದ ರೀತಿಯ ಬಗ್ಗೆ ಬೆಳಕು ಚೆಲ್ಲಿದರು.
ವಿವಿಧ ತಂಡಗಳಾಗಿ ಸಂಘಟಿತರಾದ ಸದಸ್ಯರು ತಮ್ಮ ಕೆಲಸಕಾರ್ಯಗಳ ನಡುವೆ, ಜೀವದ ಹಂಗು ತೊರೆದು ಸ್ಪಂದಿಸಿದ ಬಗ್ಗೆ ಹೆಮ್ಮೆಯಿದೆ ಎಂದು ಅವರು ತಿಳಿಸಿದರು. ಈ ಸ್ವಯಂ ಸೇವಕರು ತಮ್ಮ ಮುಂದಿನ ಜೀವನದಲ್ಲೂ ಇದೇ ರೀತಿ ತಮ್ಮ ಸೇವೆಯನ್ನು ಮುಂದುವರಿಸಿಕೊಂಡು, ಸಮುದಾಯದ ಅಮೂಲ್ಯ ಆಸ್ತಿಯಾಗಬೇಕೆಂದು ಅವರು ಕರೆ ನೀಡಿದರು.
ಕೋವಿಡ್ ಸಂದರ್ಭದ ಸಾಮಾಜಿಕ ಸೇವೆ ಕುರಿತ ಕಿರುಚಿತ್ರಣವನ್ನು ಮಿಹಾಫ್ ಸುಲ್ತಾನ್ ನಡೆಸಿಕೊಟ್ಟರು. ಇಂಡಿಯಾ ಫ್ರಾಟರ್ನಿಟಿ ಫೋರಂ ಇದರ ಪ್ರಾಂತೀಯ ಅಧ್ಯಕ್ಷ ಬಶೀರ್ ಮಾತನಾಡಿ, ಕೋವಿಡ್ ವಾರಿಯರ್ಸ್ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್ 19 ಸಂದರ್ಭ ಸೇವೆ ಸಲ್ಲಿಸಿದ ವೈದ್ಯರು, ಇತರ ಕಾರ್ಯಕರ್ತರಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.