ಬೆಳಗಾವಿ: ಏತ ನೀರಾವರಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಸಂಬಂಧ ಹಣ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಬುಧವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಜಮೀನು ಕಳೆದುಕೊಂಡವವರು ಸೂಕ್ತ ರೀತಿಯಲ್ಲಿ ದಾಖಲೆ ಸಲ್ಲಿಕೆ ಮಾಡುತ್ತಾರೋ, ಅವರಿಗೆ ಪರಿಹಾರ ದೊರೆಯಲಿದೆ ಎಂದರು.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ವ್ಯಾಪ್ತಿಯ ಕೆರೆ ತುಂಬಿಸುವ ಏತ ನೀರಾವರಿ ಯೋಜನೆಗಳಿಗಾಗಿ ಇದುವರೆಗೆ 23 ಗ್ರಾಮಗಳಲ್ಲಿ 127 ಎಕರೆ ಜಮೀನು ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯವಾಗಿದೆ ಎಂದು ತಿಳಿಸಿದರು.
ಇನ್ನೂ, ಭೂ ಮಾಲೀಕರಿಗೆ ಪರಿಹಾರ ನೀಡುವ ಸಂಬಂಧ ತಕರಾರು, ಪೌತಿಖಾತೆ ಬದಲಾವಣೆ, ಜಮೀನಿನ ಹಕ್ಕಿನ ಬಗ್ಗೆ ಸಿವಿಲ್ ನ್ಯಾಯಾಲಯಗಳಲ್ಲಿರುವ ಪ್ರಕರಣಗಳು, ಜಂಟಿ ಖಾತೆದಾರರ ಪೋಡಿಯಾಗದೇ ಉಳಿದಿರುವ ಸರ್ವೇ ನಂಬರ್ ಗಳ ಜಮೀನು ಮತ್ತು ಪರಿಹಾರ ಪಡೆಯಲು ಅಗತ್ಯ ದಾಖಲೆಗಳನ್ನು ಹಾಜರುಪಡಿಸದೇ ಇರುವುದರಿಂದ ಭೂಮಾಲೀಕರಿಗೆ ಪರಿಹಾರ ಪಾವತಿಸಲು ವಿಳಂಬವಾಗುತ್ತಿದೆ.
ಈ ಸಮಸ್ಯೆಗಳನ್ನು ಸರಿಪಡಿಸಲು ಭೂಸ್ವಾಧಿನಾಧಿಕಾರಿಯವರ ಕಚೇರಿಯಿಂದಲೇ ಜಮೀನಿನ ಅಗತ್ಯ ದಾಖಲೆಗಳನ್ನು ಆಯಾಮ ಸಕ್ಷಮ ಪ್ರಾಧಿಕಾರಿಗಳಿಂದ ಪಡೆದು ಭೂಮಾಲೀಕರಿಗೆ ಜಮೀನಿನ ಪರಿಹಾರ ಪಾವತಿಸಲು ಆಗುತ್ತಿರುವ ವಿಳಂಬವನ್ನು ನಿವಾರಿಸಲು ಯೋಜನೆಯನ್ನು ರೂಪಿಸಲು ಭೂ ಸ್ವಾಧೀನ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಶೀಘ್ರದಲ್ಲೇ ಭೂ ಮಾಲೀಕರಿಗೆ ಪರಿಹಾರ ಪಾವತಿಸಲಾಗುವುದು ಎಂದು ಹೇಳಿದರು.