ವಿಜಯ್‌ ಹಝಾರೆ ಟ್ರೋಫಿ: ಕರ್ನಾಟಕದ ಹೋರಾಟ ಕ್ವಾರ್ಟರ್‌ಫೈನಲ್’ನಲ್ಲಿ ಅಂತ್ಯ !

Prasthutha|

ಜೈಪುರ: ನಾಲ್ಕು ಬಾರಿಯ ಚಾಂಪಿಯನ್ ಕರ್ನಾಟಕ ತಂಡವು, ಈ ಬಾರಿಯ ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಹಂತದಲ್ಲಿಯೇ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ. ಅಂತಿಮ 8ರ ಘಟ್ಟದ ಪಂದ್ಯದಲ್ಲಿ ಮನೀಶ್‌ ಪಾಂಡೆ ಸಾರಥ್ಯದ ಕರ್ನಾಟಕ, ನೆರೆಯ ತಮಿಳುನಾಡು ವಿರುದ್ಧ 151 ರನ್‌ಗಳ ಅಂತರದಲ್ಲಿ ಹೀನಾಯವಾಗಿ ಸೋಲುಕಂಡಿತು.

- Advertisement -

ಕೆಎಲ್‌ ಸೈನಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಹಾಲಿ ಚಾಂಪಿಯನ್  ತಮಿಳುನಾಡು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟದಲ್ಲಿ 354 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತ್ತು. ಆದರೆ ಚೇಸಿಂಗ್’ನ ಯಾವುದೇ ಹಂತದಲ್ಲೂ ಪಂದ್ಯ ಗೆಲ್ಲುವ ಹೋರಾಟ ನಡೆಸದ ಕರ್ನಾಟಕ, 39 ಓವರ್‌ಗಳಲ್ಲಿ ಕೇವಲ 203 ರನ್‌ಗಳಿಗೆ ಸರ್ವಪತನಕಂಡಿತು.

ತಮಿಳುನಾಡು ಪರ ಆರಂಭಿಕ ಎನ್‌ ಜಗದೀಶನ್‌ ಭರ್ಜರಿ ಶತಕ ದಾಖಲಿಸಿದರೆ (102), ಆಲ್‌ರೌಂಡರ್‌ ಆರ್‌ ಸಾಯ್‌ ಕಿಶೋರ್‌ ಅರ್ಧ ಶತಕ (61) ಗಳಿಸಿ ಮಿಂಚಿದರು. ಕೊನೆಯಲ್ಲಿ ಕರ್ನಾಟಕದ ಬೌಲರ್’ಗಳನ್ನು ಮನಸ್ಸೋ ಇಚ್ಛೆ ದಂಡಿಸಿದ ದೈತ್ಯ ಆಟಗಾರ ಶಾರುಖ್‌ ಖಾನ್‌, ಕೇವಲ 39 ಎಸೆತಗಳಲ್ಲಿ ಬರೋಬ್ಬರಿ 6 ಸಿಕ್ಸರ್‌ ಹಾಗೂ 7 ಬೌಂಡರಿಗಳ ನೆರವಿನೊಂದಿಗೆ 79 ರನ್‌  ಸಿಡಿಸಿ ಅಜೇಯರಾಗುಳಿದರು. ಕರ್ನಾಟಕದ ಪರ ಲೆಗ್‌ ಸ್ಪಿನ್ನರ್‌ ಪ್ರವೀಣ್‌ ದುಬೇ 67ರನ್ ಬಿಟ್ಟುಕೊಟ್ಟು 3 ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು.

- Advertisement -
ಶಾರುಖ್‌ ಖಾನ್‌

ಕರ್ನಾಟಕ ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿದ್ದರೂ ಬ್ಯಾಟರ್’ಗಳು ತಂಡಕ್ಕೆ ನೆರವಾಗಲಿಲ್ಲ. ಸ್ಟಾರ್ ಆಟಗಾರ ದೇವದತ್ ಪಡಿಕ್ಕಲ್ ಶೂನ್ಯಕ್ಕೆ ನಿರ್ಗಮಿಸಿದರೆ, ನಾಯಕ ಮನೀಷ್ ಪಾಂಡೆ 9 ರನ್’ಗಳಿಸುವಷ್ಟರಲ್ಲೇ ಸುಸ್ತಾದರು. ಆರಂಭಿಕ ರೋಹನ್‌ ಕದಮ್‌ (24), ಕೆವಿ ಸಿದ್ಧಾರ್ಥ್ (29), ಅಭಿನವ್ ಮನೋಹರ್‌ (34) ಮತ್ತು ಎಸ್‌ ಶರತ್‌ (43) ತಕ್ಕ ಮಟ್ಟಿನ ಹೋರಾಟ ಪ್ರದರ್ಶಿಸಿದರೂ ಹೀನಾಯ ಸೋಲು ತಪ್ಪಿಸಲು ಅವರಿಂದಾಗಲಿಲ್ಲ.

ತಮಿಳುನಾಡು ಪರ ವಾಷಿಂಗ್ಟನ್‌ ಸುಂದರ್‌ 43 ರನ್ ಕೊಟ್ಟು 3 ವಿಕೆಟ್‌ ಕಿತ್ತರೆ, ಮಧ್ಯಮ ವೇಗಿ ರಘುಪತಿ ಸಿಳಂಬರಸನ್‌ 4 ವಿಕೆಟ್‌  ಪಡೆದು ಮಿಂಚಿದರು. ವಿದರ್ಭ ಹಾಗೂ ಸೌರಾಷ್ಟ್ರ ತಂಡಗಳ ನಡುವಿನ ಪಂದ್ಯದ ವಿಜೇತರನ್ನು, ತಮಿಳುನಾಡು ತಂಡ ಸೆಮಿಫೈನಲ್‌ ಪಂದ್ಯದಲ್ಲಿ ಎದುರಿಸಲಿದೆ.



Join Whatsapp