ಪಾಟ್ನಾ: ಚುನಾವಣೆಯ ಮಧ್ಯೆ ಬಿಹಾರಕ್ಕೆ ಭೇಟಿ ನೀಡುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಬಿಹಾರ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಪತ್ರ ಬರೆದಿದ್ದಾರೆ. ಪ್ರಧಾನಿ ಮೋದಿಯನ್ನು ಬಿಹಾರಕ್ಕೆ ಸ್ವಾಗತಿಸುತ್ತಾ ರಾಷ್ಟ್ರೀಯ ಜನತಾ ದಳ (ಆರ್.ಜೆ.ಡಿ)ದ ನಾಯಕರು ನವೆಂಬರ್ 1 ರ ದಿನಾಂಕವನ್ನು ನಮೂದಿಸಲಾಗಿರುವ ಈ ಎರಡು ಪುಟಗಳ ಪತ್ರ ಚಿತ್ರವನ್ನು ಇಂದು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪತ್ರದಲ್ಲಿ ಬಿಹಾರ ಎದುರಿಸುತ್ತಿರುವ ಸಮಸ್ಯೆ ಮತ್ತು ಪ್ರಧಾನಿಯ ಈ ಹಿಂದಿನ ಈಡೇರದ ಭರವಸೆಗಳ ಕುರಿತು ಉಲ್ಲೇಖಿಸಿದ್ದಾರೆ.
“ಆರು ವರ್ಷಗಳ ಹಿಂದೆ ಬಿಹಾರ ಜನತೆಗೆ ನೀವು ನೀಡಿರುವ ಭರವಸೆಗಳನ್ನು ಮರೆತಿಲ್ಲವೆಂದು ನಾನು ಭಾವಿಸುತ್ತೇನೆ” ಎಂದು ಯಾದವ್ ಟ್ವೀಟ್ ಮಾಡಿದ್ದಾರೆ.
2015ರ ಚುನಾವಣೆಯ ವೇಳೆ ಬಿಹಾರಕ್ಕೆ ಪ್ರಧಾನಿಗಳು ನೀಡಿದ 1.25 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ನ ಭರವಸೆಯ ಕುರಿತು ಪತ್ರದಲ್ಲಿ ಈಡೇರದ ಭರವಸೆಗಳ ಪಟ್ಟಿಯ ಆರಂಭದಲ್ಲಿ ಉಲ್ಲೇಖಿಸಲಾಗಿದೆ.
“ಬಿಹಾರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವುದಕ್ಕೆ ಎಷ್ಟುಕಾಲ ಕಾನೂನುಗಳನ್ನು ನೆಪವಾಗಿ ಬಳಸಲಾಗುತ್ತದೆ? 40 ಸಂಸದರಲ್ಲಿ 39 ಮಂದಿಯನ್ನು ನೀಡಿದ ರಾಜ್ಯಕ್ಕಾಗಿ ಕಾನೂನುಗಳನ್ನು ತಿದ್ದುಪಡಿಗೊಳಿಸಲು ಸಾಧ್ಯವಿಲ್ಲವೇ? ಎಲ್ಲದಕ್ಕಿಂತ ಹೆಚ್ಚಾಗಿ ನೀವು ಇತರ ವಿಷಯಗಳಲ್ಲಿ ಸಂವಿಧಾನವನ್ನು ಕೂಡ ಬದಲಿಸಿದ್ದೀರಿ” ಎಂದು ತೇಜಸ್ವಿ ಬರೆದಿದ್ದಾರೆ.
ಪಾಟ್ನಾ ವಿಶ್ವವಿದ್ಯಾನಿಲಯಕ್ಕೆ ‘ಕೇಂದ್ರ’ ಸ್ಥಾನಮಾನದ ನಿರಾಕರಣೆಯ ಕುರಿತು ಅವರು ಪತ್ರದಲ್ಲಿ ದೂರಿದ್ದಾರೆ. ಪ್ರಧಾನ ಮಂತ್ರಿಗಳು ಮುಖ್ಯಸ್ಥರಾಗಿರುವ ನೀತಿ ಆಯೋಗದ ಸೂಚ್ಯಂಕಗಳ ಆಧಾರದಲ್ಲಿ ರಾಜ್ಯದ ಕುರಿತು ಕೇಂದ್ರಕ್ಕಿರುವ ‘ಮಲತಾಯಿ ಧೋರಣೆ’ಯನ್ನು ಅವರು ಪತ್ರದಲ್ಲಿ ಆಕ್ಷೇಪಿಸಿದ್ದಾರೆ.