ಮಥುರಾ | ದೇವಸ್ಥಾನದಲ್ಲಿ ನಮಾಜ್ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಫೈಸಲ್ ಖಾನ್ ಬಂಧನ

Prasthutha|

ಮಥುರಾ : ಉತ್ತರ ಪ್ರದೇಶದ ಮಥುರಾದ ದೇವಸ್ಥಾನವೊಂದರಲ್ಲಿ ಪ್ರಾರ್ಥನೆ ಸಲ್ಲಿಸಿದ ಆರೋಪದಲ್ಲಿ ಕೋಮು ಸೌಹಾರ್ಧ ಹೋರಾಟಗಾರ ಫೈಸಲ್ ಖಾನ್ ರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ಜಾಮಿಯಾ ನಗರ ಪ್ರದೇಶದಿಂದ ಫೈಸಲ್ ಅವರನ್ನು ಬಂಧಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಖಾನ್ ಅಬ್ದುಲ್ ಗಫರ್ ಖಾನ್ ಅವರ ಸಂಸ್ಥಾಪನೆಯ ‘ಖುದಾಯಿ ಖಿದ್ಮತ್ ಗರ್’ ಸಂಸ್ಥೆಯ ಸಂಚಾಲಕರಾಗಿರುವ ಫೈಸಲ್ ವಿರುದ್ಧ ಐಪಿಸಿ ಸೆಕ್ಷನ್ 153ಎ, 295, 505ರನ್ವಯ ಪ್ರಕರಣ ದಾಖಲಾಗಿದೆ.

- Advertisement -

ಸೌಹಾರ್ಧತೆಯನ್ನು ಸಾರುವ ಉದ್ದೇಶದಿಂದ ಫೈಸಲ್ ಈ ರೀತಿ ಮಾಡಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಅ.29ರಂದು ಫೈಸಲ್ ಮಥುರಾದ ನಂದಬಾಬಾ ದೇವಸ್ಥಾನಕ್ಕೆ ಭೇಟಿ ನೀಟಿದ್ದ ವೇಳೆ, ತನ್ನ ಮಧ್ಯಾಹ್ನದ ಪ್ರಾರ್ಥನೆಯ ಸಮಯವಾಗಿದ್ದುದರಿಂದ, ದೇವಸ್ಥಾನದ ಆವರಣದಲ್ಲೇ ನಮಾಜ್ ಮಾಡಿದ್ದಾರೆ. ದೇವಸ್ಥಾನದಲ್ಲಿದ್ದ ಜನರೇ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನೀವು ಈಗಾಗಲೇ ದೇವರ ಮನೆಯಲ್ಲಿದ್ದೀರಿ, ಪ್ರಾರ್ಥನೆಗಾಗಿ ಬೇರೆಡೆಗೆ ಯಾಕೆ ಹೋಗಬೇಕು? ಎಂದು ಜನರೇ ಹೇಳಿ ಪ್ರಾರ್ಥನೆಗೆ ಅವಕಾಶ ನೀಡಿದ್ದರು ಎಂದು ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಪ್ರಾರ್ಥನೆ ಮುಗಿಸಿದ ಬಳಿಕ ಫೈಸಲ್ ಮತ್ತು ಇತರರು ದೇವಸ್ಥಾನದಲ್ಲೇ ಇನ್ನೂ ಕೆಲವು ಹೊತ್ತು ಕಳೆದು, ಅಲ್ಲೇ ಊಟವನ್ನೂ ಮಾಡಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಫೈಸಲ್ ಜೊತೆಗೆ ಈ ವೇಳೆ ಅವರ ಸಹಯೋಗಿಗಳಾದ ಚಾಂದ್ ಮೊಹಮ್ಮದ್, ನೀಲೇಶ್ ಗುಪ್ತಾ ಮತ್ತು ಸಾಗರ್ ರತ್ನ ಮುಂತಾದವರಿದ್ದರು.

ಆದರೆ ದೂರು ನೀಡಿರುವ ದೇವಸ್ಥಾನದ ಅರ್ಚಕ, ಫೈಸಲ್ ಅವರು ನಮಾಜ್ ಮಾಡಿದ ಬಳಿಕ ತಮ್ಮನ್ನು ಭೇಟಿಯಾಗಿದ್ದಾರೆ ಎಂದಿದ್ದಾರೆ. ನಮಾಜ್ ಬಗ್ಗೆ ನಾನು ಪ್ರತಿಕ್ರಿಯಿಸಿದಾಗ, ಅವರು ಹಿಂದೂ ದೇವರಿಗೂ ಪ್ರಾರ್ಥನೆ ಸಲ್ಲಿಸಿದರು ಮತ್ತು ಸಂಸ್ಕೃತದ ಶ್ಲೋಕಗಳನ್ನು ಗಟ್ಟಿಯಾಗಿ ಹೇಳಿದರು. ನಮಾಜ್ ನ ವೀಡಿಯೊ ವೈರಲ್ ಮಾಡುವುದು ನನಗೆ ಇಷ್ಟವಿರಲಿಲ್ಲ. ಇಲ್ಲದಿದ್ದರೆ ನಾನು ದೂರು ನೀಡುತ್ತಿರಲಿಲ್ಲ ಎಂದು ದೂರುದಾರ ಅರ್ಚಕ ಹೇಳಿದ್ದಾರೆ.

- Advertisement -