ತಪ್ಪಿತಸ್ಥ ಪೊಲೀಸರನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸಿ ಕಟ್ಟುಕಥೆಯನ್ನು ಅನಾವರಣಗೊಳಿಸುತ್ತೇವೆ: ಶಾಫಿ ಬೆಳ್ಳಾರೆ

Prasthutha|

PFI ನಿಂದ ಮಂಗಳೂರಿನಲ್ಲಿ ಎಸ್ ಪಿ ಕಚೇರಿ ಚಲೋ

- Advertisement -

ಮಂಗಳೂರು: ಉಪ್ಪಿನಂಗಡಿಯಲ್ಲಿ ನಡೆಸಿದ ಲಾಠಿಚಾರ್ಜ್ ನಿಂದ ಆದ ಪ್ರಮಾದವನ್ನು ಮರೆಮಾಚಲು ಪೊಲೀಸರು ಕಥೆ ಕಟ್ಟುತ್ತಿದ್ದಾರೆ. ತಪ್ಪಿತಸ್ಥರನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸಿ ಈ ಕಟ್ಟು ಕಥೆಯನ್ನು ಅನಾವರಣಮಾಡದೆ ಬಿಡುವುದಿಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ತಿಳಿಸಿದ್ದಾರೆ.

ಉಪ್ಪಿನಂಗಡಿಯಲ್ಲಿ ಅಮಾಯಕರ ಮೇಲೆ ನಡೆದ ಲಾಠಿಚಾರ್ಜ್ ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ “ಎಸ್.ಪಿ.ಕಚೇರಿ ಚಲೋ” ವನ್ನು ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಲಾಠಿಗೆ ಯಾವುದೇ ಧರ್ಮ ಇಲ್ಲ. ಇರಲೂ ಬಾರದು. ಪೊಲೀಸ್ ಎಂಬುದು ಸಾಂವಿಧಾನಿಕ ಹುದ್ದೆಯಾಗಿದ್ದು, ಸರ್ವ ನಾಗರಿಕರನ್ನು ಸಮಾನವಾಗಿ ಕಾಣಬೇಕು ಹಾಗೂ ಸರ್ವರಿಗೂ ನ್ಯಾಯ ದೊರಕಿಸಿಕೊಡಬೇಕು. ಆದರೆ ಉಪ್ಪಿನಂಗಡಿ ಘಟನೆಯಲ್ಲಿ ಪೊಲೀಸರು ಅನ್ಯಾಯವೆಸಗಿದ್ದು, ಇಂತಹವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

- Advertisement -

ಪೊಲೀಸರ ಪಿಸ್ತೂಲ್ ಮತ್ತು ಲಾಠಿಗೆ ಧರ್ಮ, ಜಾತಿ, ರಾಜಕೀಯ ಯಾವುದೂ ಇರಬಾರದು. ಆದರೆ ಜಿಲ್ಲೆಯಲ್ಲಿ ಒಂದು ದಶಕದಲ್ಲಿ ನಡೆದ ಹಲವಾರು ಘಟನೆಗಳನ್ನು ತೆಗೆದು ನೋಡುವಾಗ ಮುಸ್ಲಿಮರ ವಿರುದ್ಧ ನಿರಂತರ ತಾರತಮ್ಯವೆಸಗಿರುವುದು ಕಂಡುಬರುತ್ತದೆ. ಪೊಲೀಸ್ ಠಾಣೆಯೊಳಗೆ ಪ್ರವೇಶಿಸಿ, ಬಹಿರಂಗವಾಗಿ ಬೆದರಿಕೆ ಹಾಕಿದಾಗ ಪೊಲೀಸ್ ಪಿಸ್ತೂಲ್ ಮತ್ತು ಲಾಠಿ ಎಲ್ಲಿಗೆ ಹೋಗಿತ್ತು ಎಂದು ಶಾಫಿ ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಪರಮೋನ್ನತ ಹುದ್ದೆಯಾಗಿರುವ ಜಿಲ್ಲಾಧಿಕಾರಿ ನ್ಯಾಯಾಧೀಶರಿಗೆ ಸಮಾನ. ಜಿಲ್ಲೆಯ ಸರ್ವ ಜನರ ಸಂರಕ್ಷಣೆಯ ಹೊಣೆ ಹೊತ್ತಿರುವ ಜಿಲ್ಲಾಧಿಕಾರಿಗೇ ನಿಮ್ಮ ಕಾಲರ್ ಪಟ್ಟಿಯನ್ನು ಹಿಡಿಯುತ್ತೇನೆ ಎಂದು ಗೂಂಡಾ ಒಬ್ಬ ಹೇಳಿದಾಗ ಪೊಲೀಸರ ಪಿಸ್ತೂಲ್ ಮತ್ತು ಲಾಠಿ ಎಲ್ಲಿಗೆ ಹೋಗಿತ್ತು? ಅಂತಹ ಗೂಂಡಾನನ್ನು ಬಂಧಿಸಿ ಜೈಲಿಗೆ ಹಾಕಲು ನಿಮಗೆ ಸಾಧ್ಯವಾಗಿಲ್ಲವಾದರೆ ನಿಮ್ಮ ಮೇಲೆ ಭರವಸೆ ಇಡುವುದಾದರೂ ಹೇಗೆ? ಎಂದು ಶಾಫಿ ಬೆಳ್ಳಾರೆ ಪ್ರಶ್ನಿಸಿದರು.

 ಐದಾರು ತಿಂಗಳ ಹಿಂದೆ ಸುಳ್ಯ ಇನ್ಸ್ ಪೆಕ್ಟರ್ ಗೆ “ಠಾಣೆಯಿಂದ ಹೊರಗೆ ಬಾ, ನೋಡಿಕೊಳ್ಳುತ್ತೇವೆ” ಎಂದು ಲೋಕಲ್ ರೌಡಿಯೊಬ್ಬ ಬೆದರಿಕೆ ಹಾಕಿದಾಗ ಪಿಸ್ತೂಲ್ ಮತ್ತು ಲಾಠಿಯ ಧರ್ಮ ಎಲ್ಲಿ ಹೋಗಿತ್ತು?. ಸಂಪ್ಯ ಎಸ್ ಐ ವಿರುದ್ಧ ಪುತ್ತೂರು ನಗರದಲ್ಲಿ ಬಹಿರಂಗ ಸಭೆಯಲ್ಲಿ ಕೊಲೆ ಬೆದರಿಕೆ ಹಾಕಿದಾಗ ಪೊಲೀಸ್ ಪಿಸ್ತೂಲ್ ಯಾಕೆ ಶಬ್ದ ಮಾಡಲಿಲ್ಲ. ಪದೇ ಪದೇ ಮುಸ್ಲಿಮ್ ಸಮುದಾಯವನ್ನು ಯಾಕೆ ಗುರಿಪಡಿಸಲಾಗುತ್ತಿದೆ, ಈ ಸಮುದಾಯದ ವಿರುದ್ಧ ಮಾತ್ರ ಲಾಠಿ ಏಕೆ ಪ್ರಯೋಗಿಸಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು. 

ಸೋ ಕಾಲ್ಡ್ ಜಾತ್ಯತೀತರು ಜಿಲ್ಲೆಯಲ್ಲಿ ಕೋಮುವಾದಕ್ಕೆ ಗೊಬ್ಬರ ಹಾಕಿ ಬೆಳೆಸಿದ್ದಾರೆ. ಇಂತಹವರ ಪುಕ್ಕಟೆ ಸಲಹೆ ನಮಗೆ ಅಗತ್ಯವಿಲ್ಲ. ನ್ಯಾಯವನ್ನು ಯಾರೂ ತಟ್ಟೆಯಲ್ಲಿ ತಂದು ಕೊಡುವುದಿಲ್ಲ. ಅದನ್ನು ಪಡೆಯಲು ಪಾಪ್ಯುಲರ್ ಫ್ರಂಟ್ ಗೆ ಗೊತ್ತಿದೆ. ಅನ್ನದಾತರು ಒಂದು ವರ್ಷ ಪ್ರತಿಭಟನೆ ನಡೆಸಿದ ಪರಿಣಾಮ ಅವರಿಗೆ ನ್ಯಾಯ ಸಿಕ್ಕಿದೆ. ಇದೇ ಹಾದಿಯಲ್ಲಿ ನಮ್ಮ ಸಂಘಟನೆ ಕೂಡ ನಿರಂತರ ಕಾನೂನುಬದ್ಧ ಹೋರಾಟಗಳ ಮೂಲಕ ನ್ಯಾಯ ಪಡೆದೇ ಪಡೆಯುತ್ತದೆ ಎಂದರು.

ಜಿಲ್ಲೆಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಬೇಕು. ಜಿಲ್ಲೆಯ ಪೊಲೀಸ್ ನಲ್ಲಿ ಶೇಕಡಾ 60ರಷ್ಟು ಸಂಘಪರಿವಾರದ ಬೆಂಬಲಿಗರು, ಮುಸ್ಲಿಮ್ ಧ್ವೇಷ ಇರುವವರು ಇದ್ದಾರೆ ಎಂಬುದನ್ನು ವರ್ಷಗಳ ಹಿಂದೆ ಕೋಬ್ರಾ ಪೋಸ್ಟ್ ಬಹಿರಂಗ ಪಡಿಸಿದೆ. ಇಲಾಖೆಯಲ್ಲಿ ನುಸುಳಿಕೊಂಡಿರುವ ಇಂತಹ ಕ್ರಿಮಿಗಳನ್ನು ಹೊರಹಾಕಿ ಇಲಾಖೆಯನ್ನು ಸ್ವಚ್ಛಗೊಳಿಸಲು ಹಾಲಿ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ತನಿಖೆ ಮಾಡಬೇಕು. ಹಾಗಾದರೆ ಮಾತ್ರ ಜಿಲ್ಲೆಯಲ್ಲಿ ನೆಮ್ಮದಿ ಶಾಂತಿ ಸೃಷ್ಟಿ ಸಾಧ್ಯವಾಗಲಿದೆ ಎಂದು ಹೇಳಿದರು.

ಪಾಪ್ಯುಲರ್ ಯಾವತ್ತೂ ನ್ಯಾಯದ ಪರವಾಗಿ ದೃಢವಾಗಿ ನಿಲ್ಲಲಿದೆ. 50ಕ್ಕೂ ಅಧಿಕ ಕಾರ್ಯಕರ್ತರು ಮತ್ತು ಪ್ರವಾದಿ ಕುಟುಂಬದ  ಕೊಂಡಿಯಾದ ಆತೂರ್ ತಂಙಳ್ ಅವರ ರಕ್ತ ಕೂಡ ಈ ಮಣ್ಣಿಗೆ ಹರಿದಿದೆ, ಇದು ಕ್ರಾಂತಿಯ ಆರಂಭ ಎಂದು ಹೇಳಿದ ಅವರು, ಪೊಲೀಸರನ್ನು ಜಿಲ್ಲೆಯೊಳಗೆ ಮಾತ್ರ ವರ್ಗಾವಣೆ ಮಾಡಲಾಗುತ್ತಿದೆ. ಸಂಘಪರಿವಾರ ತನಗೆ ಆಪ್ತವಾಗಿರುವ ಅಧಿಕಾರಿಗಳನ್ನು ಜಿಲ್ಲೆಯಿಂದ ಹೊರಗೆ ಹೋಗದಂತೆ ನೋಡಿಕೊಳ್ಳುತ್ತಿದೆ. ಉನ್ನತ ಅಧಿಕಾರಿಗಳು ಈ ಬಗ್ಗೆ ಕೂಲಂಕಷ ಪರಿಶೀಲನೆ ಮಾಡಬೇಕು ಎಂದು ಹೇಳಿದರು.

ಪಾಪ್ಯುಲರ್ ಫ್ರಂಟ್ ರಾಜ್ಯ ಉಪಾಧ್ಯಕ್ಷ ಅಯ್ಯೂಬ್ ಅಗ್ನಾಡಿ ಮಾತನಾಡಿ, ಉಪ್ಪಿನಂಗಡಿ ಘಟನೆಯಲ್ಲಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಸೆಟಪ್ ಮಾಡಿ ಕಾರ್ಯಕರ್ತರ ವಿರುದ್ಧ ಸುಳ್ಳಾರೋಪ ಮಾಡಿದ್ದಾರೆ. ಗಲಭೆಗೆ ಪಿತೂರಿ ಮಾಡಿದ್ದರೆ ರಾತ್ರಿ ಒಂದು ಗಂಟೆಯವರೆಗೆ ನಮ್ಮ ನಾಯಕರು ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಅಗತ್ಯವಿರಲಿಲ್ಲ ಎಂದು ಹೇಳಿದರು.

ಅಮಾಯಕರ ಮೇಲೆ ಹಾಕಿರುವ ಸುಳ್ಳು ಕೇಸು ಹಿಂಪಡೆದು ಅವರನ್ನು ಬಿಡುಗಡೆಗೊಳಿಸಬೇಕು, ಕ್ರಿಮಿನಲ್ ಪ್ರಕರಣಗಳನ್ನು ನಿಭಾಯಿಸಲು ವಿಫಲವಾದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಪೊಲೀಸರ ದೌರ್ಜನ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಅಗ್ನಾಡಿ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪಿಎಫ್ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ದ.ಕ.ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್, ಮಂಗಳೂರು ನಗರಾಧ್ಯಕ್ಷ ಖಾದರ್ ಕುಳಾಯಿ, ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಮುನೀಬ್ ಬೆಂಗ್ರೆ, ಎಸ್.ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿಗಳಾದ ರಿಯಾಝ್ ಫರಂಗಿಪೇಟೆ, ಅಲ್ಫಾನ್ಸೋ ಫ್ರಾಂಕೋ, ಪಕ್ಷದ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಎಸ್.ಪಿ.

ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಸೋನಾವಣೆ ಮತ್ತು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿ ಪ್ರತಿಭಟನಕಾರರ ಮನವಿಯನ್ನು ಆಲಿಸಿದರು. ಪಿಎಫ್ಐ ಜಿಲ್ಲಾಧ್ಯಕ್ಷ ಇಜಾಝ್ ಅಹ್ಮದ್ ಮತ್ತು ಇತರ ನಾಯಕರು ಮನವಿ ಪತ್ರವನ್ನು ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸಿದರು. ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವುದಾಗಿ ಎಸ್.ಪಿ.ಭರವಸೆ ನೀಡಿದರು.

ಇದಕ್ಕೂ ಮೊದಲು ಕ್ಲಾಕ್ ಟವರ್ ನಿಂದ ಎಸ್.ಪಿ.ಕಚೇರಿವರೆಗೆ ಮೆರವಣಿಗೆ ಹೊರಟ ಪಾಪ್ಯುಲರ್ ಫ್ರಂಟ್ ನಾಯಕರು ಮತ್ತು ಕಾರ್ಯಕರ್ತರನ್ನು ಮಾರ್ಗ ಮಧ್ಯೆ ಪೊಲೀಸರು ತಡೆದರು. ಇದರಿಂದ ಪ್ರತಿಭಟನಕಾರರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. ಜಿಲ್ಲೆಯ ವಿವಿಧ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಯ ಕಾರ್ಯಕರ್ತರು, ಸಾರ್ವಜನಿಕರು ಆಗಮಿಸಿದ್ದರು.

ಆಸ್ಪತ್ರೆಯಿಂದ ನೇರವಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆತೂರ್ ತಂಙಳ್

ಇತ್ತೀಚೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ನಡೆಸಿದ ಲಾಠಿಚಾರ್ಜ್ ನಿಂದ ತೀವ್ರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಧಾರ್ಮಿಕ ವಿದ್ವಾಂಸ ಅಸ್ಸಯ್ಯದ್ ಇಬ್ರಾಹೀಂ ಹಾದಿ ತಂಙಳ್ ಆಸ್ಪತ್ರೆಯಿಂದ ಶುಕ್ರವಾರ ಬಿಡುಗಡೆಗೊಂಡರು. ಬಳಿಕ ಅವರು ನೇರವಾಗಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಎಸ್.ಪಿ.ಕಚೇರಿ ಚಲೋದಲ್ಲೂ ಪಾಲ್ಗೊಂಡರು.



Join Whatsapp