ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಶಾಸಕ ಕೋನರೆಡ್ಡಿ

Prasthutha|

ಬೆಳಗಾವಿ: ಜೆಡಿಎಸ್ ನಾಯಕ, ಮಾಜಿ ಶಾಸಕ ಕೋನರೆಡ್ಡಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದರು. ಹಲವು ದಿನಗಳಿಂದ ಕಾಂಗ್ರೆಸ್ ಪರವಾಗಿ ಕೆಲಸಗಳನ್ನು ಮಾಡುತ್ತಿದ್ದ ಅವರು ಮಂಗಳವಾರ ಅಧಿಕೃತವಾಗಿ ಪಕ್ಷ ಸೇರಿದರು. ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕೋನರೆಡ್ಡಿ ತಮ್ಮ ಹಲವು ಬೆಂಬಲಿಗರ ಜೊತೆ ಕಾಂಗ್ರೆಸ್ ಪಕ್ಷ ಸೇರಿದರು. ಅಧಿವೇಶನದ ಪ್ರಯಕ್ತ ಎಲ್ಲಾ ಕಾಂಗ್ರೆಸ್ ನಾಯಕರು ಅಲ್ಲಿಯೇ ಇರುವುದರಿಂದ ಪಕ್ಷ ಸೇರ್ಪಡೆ ಕಾರ್ಯಕ್ರಮ ಅಲ್ಲಿಯೇ ಆಯೋಜಿಸಲಾಗಿತ್ತು.

- Advertisement -

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮುಂತಾದ ನಾಯಕರು ಪಕ್ಷದ ಬಾವುಟ ನೀಡಿ ಎನ್. ಎಚ್. ಕೋನರಡ್ಡಿಯನ್ನು ಪಕ್ಷಕ್ಕೆ ಬರಮಾಡಿಕೊಂಡರು. ಕೋನರೆಡ್ಡಿ ಬರಮಾಡಿಕೊಂಡ ಬಳಿಕ ಮಾತನಾಡಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, “ಕೋನರಡ್ಡಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು ಅವರ ರಾಜಕೀಯ ಜೀನವನಕ್ಕೆ ದೊಡ್ಡ ತಿರುವು ನೀಡಲಿದೆ. ಜೆಡಿಎಸ್‌ ರಾಜ್ಯವ್ಯಾಪಿ ನೆಲೆ ಹೊಂದಿಲ್ಲ. ಅದು ಕೆಲವೇ ಜಿಲ್ಲೆಗೆ ಮಾತ್ರ ಸೀಮಿತ ಪಕ್ಷವಾಗಿದೆ” ಎಂದರು.

ಹಲವಾರು ಜೆಡಿಎಸ್ ನಾಯಕರು ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಮಾಜಿ ಪರಿಷತ್ ಸದಸ್ಯ ಸಿ. ಆರ್.‌ ಮನೋಹರ್ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಚಾಮುಂಡೇಶ್ವರಿ ಕ್ಷೇತ್ರ ಶಾಸಕ ಜಿ. ಟಿ. ದೇವೇಗೌಡ, ಕೋಲಾರ ಶಾಸಕ ಕೆ. ಶ್ರೀನಿವಾಸ ಗೌಡ ಕಾಂಗ್ರೆಸ್ ಸೇರುವ ತಯಾರಿಯಲ್ಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ, “ಯಾವುದೇ ಷರತ್ತುಗಳು ಇಲ್ಲದೇ ಕೋನರೆಡ್ಡಿ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಎಐಸಿಸಿಯ ಗಮನಕ್ಕೆ ತಂದು ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ” ಎಂದು ಹೇಳಿದರು.



Join Whatsapp