ಕರಾಚಿ: ಪ್ರಸಕ್ತ ವರ್ಷ 18 ಅಂತರಾಷ್ಟ್ರೀಯ T-20 ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಕಿಸ್ತಾನ ಕ್ರಿಕೆಟ್ ತಂಡ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಕರಾಚಿಯಲ್ಲಿ ನಡೆದ ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ T-20 ಪಂದ್ಯದಲ್ಲಿ 63 ರನ್’ಗಳ ಅಂತರದಲ್ಲಿ ಗೆಲುವು ಕಾಣುವುದರ ಮೂಲಕ ಪಾಕಿಸ್ತಾನ ತಂಡವು, ಒಂದು ವರ್ಷದಲ್ಲಿ ಅತಿ ಹೆಚ್ಚು ಅಂತರಾಷ್ಟ್ರೀಯ T-20 ಪಂದ್ಯಗಳನ್ನು ಗೆದ್ದ ವಿಶ್ವದಾಖಲೆಯನ್ನು ತನ್ನದಾಗಿಸಿಕೊಂಡಿದೆ.
2018ರಲ್ಲಿ ಒಟ್ಟು 17 T-20 ಪಂದ್ಯಗಳನ್ನು ಗೆದ್ದ ತಮ್ಮದೇ ದಾಖಲೆಯನ್ನು ಪಾಕಿಸ್ತಾನ ಇದೀಗ ಮತ್ತಷ್ಟು ಉತ್ತಮಪಡಿಸಿಕೊಂಡಿದೆ. ನ್ಯಾಷನಲ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ T-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ 6 ವಿಕೆಟ್ ನಷ್ಟದಲ್ಲಿ 200 ರನ್ ಗಳಿಸಿತ್ತು. ಆರಂಭಿಕರಾದ ಮುಹಮ್ಮದ್ ರಿಝ್ವಾನ್ 78 ರನ್ ಹಾಗೂ ಹೈದರ್ ಅಲಿ 68 ರನ್’ಗಳಿಸಿ ಮಿಂಚಿದರು. ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಮುಹಮ್ಮದ್ ನವಾಜ್ 10 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ಅಜೇಯ 30 ರನ್ ಗಳಿಸಿದರು.
201 ರನ್ಗಳ ಗುರಿ ಬೆನ್ನತ್ತಿದ ವಿಂಡೀಸ್ ತಂಡ 19 ಓವರ್’ಗಳಲ್ಲಿ 137 ರನ್’ಗಳಿಗೆ ಸರ್ವಪತನ ಕಂಡಿತು. ವಿಂಡೀಸ್ ಬ್ಯಾಟಿಂಗ್’ನಲ್ಲಿ ಆರಂಭಿಕ ಶಾಯ್ ಹೋಪ್ 31 ರನ್ಗಳಿಸಿದರೆ, ಪಾಕಿಸ್ತಾನ ಪರ ಮುಹಮ್ಮದ್ ವಾಸಿಂ ಜೂನಿಯರ್ 4 ವಿಕೆಟ್ ಪಡೆದರು.