ಭೋಪಾಲ್: ಸಂಘಪರಿವಾರದ ಕಾರ್ಯಕರ್ತರು ಮದುವೆ ಸಮಾರಂಭವೊಂದರಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತಾ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಪೈಶಾಚಿಕ ಕೃತ್ಯವೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಮಾಜಿ ಸರಪಂಚ್ ದೇವಿಲಾಲ್ ಮೀನಾ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳ ಗುಂಡೇಟಿನಿಂದ ಗಂಭೀರ ಗಾಯಗೊಂಡಿದ್ದ ದೇವಿಲಾಲ್ ರನ್ನು ತಕ್ಷಣ ರಾಜಸ್ಥಾನದ ಕೋಟಾದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜೈಲಿನಲ್ಲಿರುವ ಸ್ವಯಂ ಘೊಷಿತ ದೇವಮಾನವ ರಾಂಪಾಲ್ ಅವರ ಅನುಯಾಯಿಗಳು ಆಯೋಜಿಸಿದ್ದ ಮದುವೆ ಸಮಾರಂಭದಲ್ಲಿ ಈ ದಾಳಿ ನಡೆದಿದೆ. ಹರಿಯಾಣ ಮೂಲದ ರಾಂಪಾಲ್, ಐವರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಆರು ಜನರನ್ನು ಕೊಂದ ಆರೋಪದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ರಾಮೈಣಿ ಎಂಬ ಹೆಸರಿನಲ್ಲಿ ಕೇವಲ 17 ನಿಮಿಷಗಳ ಕಾಲ ನಡೆಯುವ ಈ ವಿನೂತನ ಮದುವೆಯು ಹಿಂದೂ ವಿರೋಧಿ ಸಂಸ್ಕೃತಿಯಾಗಿದೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ ಎಂದು ರಾಮ್‌ಪಾಲ್ ಅವರ ಅನುಯಾಯಿಗಳು ತಿಳಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್ ನಾಯಕ ಶೈಲೇಂದ್ರ ಓಜಾ ದಾಳಿಯ ನೇತೃತ್ವ ವಹಿಸಿದ್ದರು ಎಂದು ಆರೋಪಿಸಲಾಗಿದೆ.
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News