ಚೆನ್ನೈ: ಮೀನು ಮಾರುವ ವೃದ್ಧ ಮಹಿಳೆಯನ್ನು ವಾಸನೆಯ ನೆಪವೊಡ್ಡಿ ಸರ್ಕಾರಿ ಬಸ್ಸಿನಿಂದ ಬಲವಂತವಾಗಿ ಕೆಳಗಿಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗಳನ್ನು ಅಮಾನತುಗೊಳಿಸಿದ ಘಟನೆ ತಮಿಳುನಾಡಿನ ಕನ್ಯಾಕುಮಾರಿಯಿಂದ ವರದಿಯಾಗಿದೆ.
ಕನ್ಯಾಕುಮಾರಿ ಸಮೀಪದ ವಾಣಿಯಕುಡಿ ಗ್ರಾಮದ ನಿವಾಸಿಯಾದ ವೃದ್ಧೆ ಸೆಲ್ವಂ ಎಂಬಾಕೆಯೇ ಸಂತ್ರಸ್ತೆಯಾಗಿದ್ದು, ಜೀವನೋಪಾಯಕ್ಕಾಗಿ ಮೀನು ಮಾರುತ್ತಿರುವ ಸೆಲ್ವಂ ಕೊಳಚೆಲ್ ಬಸ್ ನಿಲ್ದಾಣ ತಲುಪಿ, ಊರಿಗೆ ತಲುಪಲು ಬಸ್ಸು ಹತ್ತಿದಾಗ ಮೀನಿನ ವಾಸನೆಯ ಕಾರಣಕ್ಕಾಗಿ ಬಸ್ಸಿನಿಂದ ಕೆಳಗಿಳಿಯುವಂತೆ ಬಸ್ ನಿರ್ವಾಹಕ ಬಲವಂತಪಡಿಸಿದ್ದನು.
ಈ ಕೃತ್ಯವನ್ನು ಖಂಡಿಸಿರುವ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಘಟನೆಯಿಂದ ತುಂಬಾ ಆಘಾತವಾಗಿದೆ ಎಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ಕಂಡಕ್ಟರ್ ಗಳು ಸಮರ್ಥವಾಗಿ ಜಾರಿಗೆ ತರುತ್ತಿರುವ ಈ ಸಂದರ್ಭದಲ್ಲಿ ಈ ರೀತಿಯ ಅಮಾನವೀಯ ಘಟನೆ ಖಂಡನೀಯ ಎಂದು ತಿಳಿಸಿದ್ದಾರೆ. ರಾಜ್ಯದ ಪ್ರತಿ ನಾಗರಿಕರು ಸಮಾನತೆಯ ಭಾವನೆಯಿಂದ ಕಾರ್ಯಪ್ರವೃತ್ತವಾಗಬೇಕಿದೆ ಎಂದು ಅವರು ತಿಳಿಸಿದರು.
ಘಟನೆಯ ಬಗ್ಗೆ ಸಮಯಪಾಲಕರಿಗೆ ಮಹಿಳೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಮಹಿಳೆ ತಮ್ಮ ಅಳಲನ್ನು ಸಾರ್ವಜನಿಕರ ಬಳಿ ತೋಡಿಕೊಂಡಾಗ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಈ ಕುರಿತು ಬಸ್ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿಗರು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಮೈಕೆಲ್, ನಿರ್ವಾಹಕ ಮಣಿಕಂದನ್ ಮತ್ತು ಸಮಯಪಾಲಕ ಜಯಕುಮಾರ್ ಎಂಬವರನ್ನು ಸಾರಿಗೆ ಇಲಾಖೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.