ಬೆಂಗಳೂರು; ನಗರದಲ್ಲಿ ಪಬ್ ಜೀ ಗೇಮ್ ಗೆ ಮತ್ತೊಬ್ಬ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. ಒಂಬತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಪಬ್ ಜೀ ಗೇಮ್ ಚಟಕ್ಕೆ ಜೀವ ತೆತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಹುಳಿಮಾವುವಿನ ವೇಣುಗೋಪಾಲನಗರದಲ್ಲಿ ಕಳೆದ ಡಿ.4ರಂದು ರಾತ್ರಿ ಅಪಾರ್ಟ್ಮೆಂಟಿನ 12ನೇ ಮಹಡಿಯಿಂದ ಕೆಳಗೆ ಬಿದ್ದು 9ನೇ ತರಗತಿ ವಿದ್ಯಾರ್ಥಿನಿಯು ಸಾವನ್ನಪ್ಪಿದ್ದಳು.
ಕಾರಣ ಹುಡುಕಿದ ಹುಳಿಮಾವು ಪೊಲೀಸರಿಗೆ ಆಕೆ ಪಬ್ ಜಿ ಗೇಮ್ ಸೋತ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ ಎಂದು ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ತಿಳಿಸಿದ್ದಾರೆ.
ಶಾಲೆಗೆ ಹೋಗದೇ ಆನ್ ಲೈನ್ ಕ್ಲಾಸ್ ಮಾಡುತ್ತಿದ್ದ ನಗರದಲ್ಲಿಯೇ 20 ವರ್ಷದಿಂದ ನೆಲೆಸಿದ್ದ ಉತ್ತರಪ್ರದೇಶ ಮೂಲದ ವೀರೇಂದ್ರಕುಮಾರ್ ಹಾಗೂ ಸುಮನ್ ದಂಪತಿಯ ಪುತ್ರಿ ಖಾಸಗಿ ಸ್ಕೂಲ್ ನ 9ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ (14) ಪಬ್ ಜಿ ಗೇಮ್ ಹುಚ್ಚಿಗೆ ಬಿದ್ದಿದ್ದಳು.
ಎರಡು ದಿನಗಳ ಹಿಂದೆ ಪಬ್ ಜೀ ಗೇಮ್ ನಲ್ಲಿ ತನಗೆ ನೀಡಿದ್ದ ಟಾಸ್ಕ್ ಪೊರೈಸಲು ವಿಫಲರಾಗಿದ್ದರಿಂದ ನೊಂದಿದ್ದು ಅದು ಮನೆಯವರ ಗಮನಕ್ಕೆ ಬರದಂತೆ ಡಿ.4 ರಾತ್ರಿ 9.40ರ ವೇಳೆ ಕುಟುಂಬದವರ ಜೊತೆ ಕುಳಿತು ಊಟ ಮಾಡಿದ್ದಳು. ಮನೆಯವರೆಲ್ಲರೂ ಹಾಲ್ ನಲ್ಲಿ ಕುಳಿತಿದ್ದಾಗ ಬಾಲ್ಕನಿಯಲ್ಲಿ ಲಾಕ್ ಮಾಡಿಕೊಂಡು ಆಟವಾಡುವುದಾಗಿ ವೈಷ್ಣವಿ ಹೋಗಿದ್ದಳು ಏನೋ ಬಿದ್ದ ರೀತಿ ಶಬ್ದ ಆದಾಗ ಬಾಲ್ಕನಿ ಬಳಿ ಹೋಗಿ ಪೋಷಕರು ನೋಡಿದಾಗ ಮಗಳು ಬಿದ್ದಿರುವುದು ಗೊತ್ತಾಗಿದೆ.
ಕೆಳಗೆ ಬಂದು ನೋಡಿದಾಗ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಳು.
ಸುದ್ದಿ ತಿಳಿದ ಹುಳಿಮಾವು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಆಕೆ ಪಬ್ ಜೀ ಗೇಮ್ ನಿಂದ ಜೀವ ಕಳೆದುಕೊಂಡಿರುವುದು ಪತ್ತೆಯಾಗಿದೆ.