ಮೊಹಾಲಿ: ಶರವೇಗದಲ್ಲಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಬಳಿಕ ರಸ್ತೆ ದಾಟಲು ನಿಂತಿದ್ದ ಇಬ್ಬರಿಗೆ ಕ್ಷಣಾರ್ಧದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸೇರಿದಂತೆ ಒಟ್ಟು ನಾಲ್ವರು ಮೃತಪಟ್ಟ ಘಟನೆ ಪಂಜಾಬ್’ನ ಮೊಹಾಲಿಯಲ್ಲಿ ನಡೆದಿದೆ.
ಭೀಕರ ಅಪಘಾತದ ದೃಶ್ಯ CCTVಯಲ್ಲಿ ಸೆರೆಯಾಗಿದ್ದು, ಚಂಡೀಗಢ ವಿಶ್ವವಿದ್ಯಾಲಯ ಸಮೀಪದ ಹೆದ್ದಾರಿಯ ನೇರ ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡ ನೀಲಿ ಬಣ್ಣದ ಹ್ಯೂಂಡೈ ವರ್ನಾ ಕಾರು, ಝೀಬ್ರಾಕ್ರಾಸ್ ಬಳಿ ರಸ್ತೆ ದಾಟಲು ನಿಂತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಕಾರಿನ ಜೊತೆಯಲ್ಲೇ ಪಾದಾಚಾರಿಗಳಿಬ್ಬರು ಸಹ ಆಕಾಶದೆತ್ತರಕ್ಕೆ ಚಿಮ್ಮಿರುವ ಭಯಾನಕ ದೃಶ್ಯ ಮೈಜುಮ್ಮೆನಿಸುವಂತಿದೆ. ಘಟನೆಯಲ್ಲಿ 5 ಮಂದಿಗೆ ಗಂಭೀರ ಗಾಯಗಳಾಗಿವೆ.
ಮೃತರನ್ನು ಕಾರು ಚಾಲಕ ಅಂಕುಶ್, ಗರೌನ್ ನಿವಾಸಿಗಳಾದ ಜಮಿಲ್ ಖಾನ್, ಅಟೋ ಚಾಲಕರಾದ ಸುರೀಂದರ್ ಶಿಂದಾ ಹಾಗೂ ಸಂಜೀತ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಒಟ್ಟು ಐದು ಮಂದಿ ಲೂಧಿಯಾನದಿಂದ ಚಂಡೀಗಢಕ್ಕೆ ಪ್ರಯಾಣಿಸುತ್ತಿದ್ದರು ಎಂದು ASI ಬಲ್’ಬೀರ್ ಸಿಂಗ್ ಹೇಳಿದ್ದಾರೆ. ಏಕಮುಖ ರಸ್ತೆಯಲ್ಲಿ ಬೈಕ್ ಸವಾರನೊಬ್ಬ ವಿರುದ್ಧ ದಿಕ್ಕಿನಿಂದ ಬಂದ ಕಾರಣ ಕಾರು ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆ ಎಂದು ಬಲ್’ಬೀರ್ ಸಿಂಗ್ ಹೇಳಿದ್ದಾರೆ.