ಅಂಬೇಡ್ಕರ್ ಕೃತಿಗಳ ಪ್ರಕಟಣೆ ಸ್ಥಗಿತಗೊಳಿಸುವ ನಿರ್ಧಾರ: ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಬಾಂಬೆ ಹೈಕೋರ್ಟ್

Prasthutha|

ಮುಂಬೈ: ಡಾ. ಬಿ ಆರ್ ಅಂಬೇಡ್ಕರ್ ಕೃತಿಗಳ ಪ್ರಕಟಣಾ ಯೋಜನೆ ಸ್ಥಗಿತಗೊಳಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಬುಧವಾರ ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಪರಿಗಣಿಸಿದೆ.

- Advertisement -

ನವೆಂಬರ್ 24, 2021 ರಂದು ಮರಾಠಿ ದೈನಿಕ ʼಲೋಕಸತ್ತಾʼದಲ್ಲಿ ಈ ಯೋಜನೆಯ ಕುರಿತು ಪ್ರಕಟವಾದ ಸುದ್ದಿಯನ್ನು ನ್ಯಾಯಮೂರ್ತಿಗಳಾದ ಪಿ ಬಿ ವರಾಲೆ ಮತ್ತು ಎಸ್‌ ಎಂ ಮೋದಕ್ ಅವರಿದ್ದ ಪೀಠವು ಗಮನಿಸಿದೆ. ವರದಿಯ ಪ್ರಕಾರ ಪ್ರಕಟವಾಗುತ್ತಿರುವ ಸಾಹಿತ್ಯದ ಸಂಪುಟಗಳಿಗೆ ಭಾರಿ ಬೇಡಿಕೆಯಿದ್ದು, ಅದಕ್ಕೆ ತಕ್ಕಂತೆ ಪೂರೈಕೆ ಮಾಡಲು ವ್ಯವಸ್ಥಾಪನಾ ತೊಂದರೆಗಳಿಂದಾಗಿ ಸರ್ಕಾರಿ ಮುದ್ರಣಾಲಯಕ್ಕೆ ಸಾಧ್ಯವಾಗಿಲ್ಲ ಎಂದು ವರದಿ ಹೇಳಿದೆ.

ಇಂತಹ ಪ್ರಕಟಣೆ ಈಗಿನ ಮತ್ತು ಭವಿಷ್ಯದ ಪೀಳಿಗೆಗೆ ಅವಶ್ಯಕ ಮತ್ತು ಅಪೇಕ್ಷಣೀಯವಾಗಿದ್ದು ಕಾನೂನು ಸಮುದಾಯಕ್ಕೆ ಮತ್ತು ಜನಸಾಮಾನ್ಯರಿಗೆ ಉಪಯುಕ್ತವಾಗಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಆದ್ದರಿಂದ ಯೋಜನೆ ಸ್ಥಗಿತಗೊಂಡ ವಿಚಾರ ಮತ್ತು ಅದಕ್ಕೆ ಕಾರಣ ಪರಿಶೀಲಿಸುವುದು ಅಗತ್ಯ. ಸುದ್ದಿಯಲ್ಲಿ ಉಲ್ಲೇಖಿಸಿರುವ ಸಮಸ್ಯೆಯ ಸ್ವರೂಪವನ್ನು ಪರಿಗಣಿಸಿ, ಆ ಸುದ್ದಿಯನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಷಯವಾಗಿ ಪರಿಗಣಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಯೋಜನೆ ಸ್ಥಗಿತದ ಹಿಂದಿನ ಕಾರಣ ಮತ್ತು ಕುಂದುಕೊರತೆಗಳನ್ನು ಪರಿಶೀಲಿಸುವುದು ಅಗತ್ಯವೆಂದು ನ್ಯಾಯಾಲಯ ಭಾವಿಸಿದೆ.

- Advertisement -

ಕೃತಿಗಳ 9 ಲಕ್ಷ ಪ್ರತಿ ಮುದ್ರಿಸಲು ಸರ್ಕಾರ ನಿರ್ದೇಶನ ನೀಡಿತ್ತು. ₹ 5,45,00,000 ಮೊತ್ತದ ಕಾಗದವನ್ನು ರಾಜ್ಯ ಸರ್ಕಾರ ಖರೀದಿಸಿದ್ದರೂ ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ 33,000 ಪ್ರತಿಗಳನ್ನು ಮಾತ್ರ ಮುದ್ರಿಸಲಾಗಿದೆ. ಉಳಿದ ಕಾಗದ ಗೋಡೌನ್‌ಗಳಲ್ಲಿ ಬಿದ್ದಿದೆ. ಅಲ್ಲದೆ 33,000 ರಲ್ಲಿ ಕೇವಲ 3,675 ಪ್ರತಿಗಳು ಲಭ್ಯವಿವೆ. ಸರ್ಕಾರಿ ಮುದ್ರಣಾಲಯ ಆಧುನಿಕ ಯಂತ್ರೋಪಕರಣಗಳನ್ನು ಹೊಂದಿಲ್ಲ ಮತ್ತು ಅಸಮರ್ಪಕ ಮಾನವ ಸಂಪನ್ಮೂಲ ಸಮಸ್ಯೆ ಎದುರಿಸುತ್ತಿದೆ. ಸರ್ಕಾರ ಇಲ್ಲಿಯವರೆಗೆ 1 ರಿಂದ 21 ಸಂಪುಟಗಳನ್ನು ಪ್ರಕಟಿಸಿದೆ, ಆದರೆ ಭಾರೀ ಬೇಡಿಕೆಯಿಂದಾಗಿ, ಕಾಲಕಾಲಕ್ಕೆ ಅವುಗಳನ್ನು ಮರುಮುದ್ರಣ ಮಾಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಎಂದು ಪಟ್ಟಿ ಮಾಡಿ ವಿಚಾರಣೆಗಾಗಿ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಅವರ ಪೀಠಕ್ಕೆ ಸಲ್ಲಿಸುವಂತೆ ರೆಜಿಸ್ಟ್ರಿಗೆ ಸೂಚಿಸಿದೆ.

(ಕೃಪೆ: ಬಾರ್ ಆ್ಯಂಡ್ ಬೆಂಚ್)



Join Whatsapp