ನವದೆಹಲಿ: ಹರ್ಯಾಣದ ಗುರ್ಗಾಂವ್ ನಲ್ಲಿ ಸಂಘಪರಿವಾರದ ಕಾರ್ಯಕರ್ತರು ಶುಕ್ರವಾರದ ನಮಾಝ್ ಗೆ ಅಡ್ಡಿ ಪಡಿಸುತ್ತಿರುವುದನ್ನು ವಿರೋಧಿಸಿ ಡೆಪ್ಯುಟಿ ಕಚೇರಿಯ ಹೊರಗೆ ನೂರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಮಾತ್ರವಲ್ಲ ಈ ಸಂಬಂಧ ಮ್ಯಾಜಿಸ್ಟ್ರೇಟ್ ಮೂಲಕ ಹರ್ಯಾಣ ರಾಜ್ಯಪಾಲರಿಗೆ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಜ್ಞಾಪಕ ಪತ್ರವನ್ನು ಸಲ್ಲಿಸಿದರು.
ಕಳೆದ ಹಲವಾರು ತಿಂಗಳುಗಳಿಂದ ಮುಸ್ಲಿಮರ ಶುಕ್ರವಾರದ ನಮಾಝ್ ಗೆ ಅಡ್ಡಿ ಪಡಿಸುತ್ತಿರುವ ಸಂಘಪರಿವಾರಕ್ಕೆ ಸಡ್ಡು ಹೊಡೆದು ಪ್ರಗತಿಪರರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಮುಸ್ಲಿಮರನ್ನು ಬೆಂಬಲಿಸಿ ಲೋಕತಾಂತ್ರಿಕ ಮಂಚ್, ನಾಗರಿಕ ಏಕತಾ ಮಂಚ್, ಜನವಾದಿ ಮಹಿಳಾ ಸಮಿತಿ, ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ, ಸರ್ವ ಕರ್ಮಚಾರಿ ಸಂಘ ಸೇರಿದಂತೆ ಹಲವು ಸಂಘಟನೆಗಳು ಬೀದಿಗಿಳಿದಿವೆ.
ಈ ಕುರಿತು ಪ್ರತಿಕ್ರಿಯಿಸಿದ ಪ್ರತಿಭಟನಕಾರರು, ಬಿಜೆಪಿ ಮತ್ತು ಆರೆಸ್ಸೆಸ್ ಪ್ರೇರಿತ ಶಕ್ತಿಗಳು ಅಲ್ಪಸಂಖ್ಯಾತ ಸಮುದಾಯಕ್ಕೆ ನಿರಂತರ ಕಿರುಕುಳ ನೀಡುತ್ತಿವೆ ಮತ್ತು ಗುರ್ಗಾಂವ್ ನಲ್ಲಿ ಶುಕ್ರವಾರದ ನಮಾಝ್ ಗೆ ಅಡ್ಡಿಪಡಿಸುತಿವೆ ಎಂದು ಆರೋಪಿಸಿದೆ.
ಶುಕ್ರವಾರದ ನಮಾಝ್ ಗೆ ಅವಕಾಶ ನೀಡುವ ಮೂಲಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಮತ್ತು ನಮಾಝ್ ಮಾಡಲು ಸ್ಥಳಗಳನ್ನು ಖಚಿತಪಡಿಸಿಕೊಳ್ಳಲು ಪ್ರತಿಭಟನಕಾರರು ಜಿಲ್ಲಾಡಳಿತವನ್ನು ಒತ್ತಾಯಿಸಿದೆ.