ಮಿಸ್ ಕೇರಳ ಅನ್ಸಿ ಕಬೀರ್ ಸಾವು ಪ್ರಕರಣ: ಪೊಲೀಸ್ ತನಿಖೆಯಲ್ಲಿ ಮತ್ತೊಂದು ಮಹತ್ವದ ತಿರುವು

Prasthutha|

ಕೊಚ್ಚಿ: ಅಕ್ಟೋಬರ್ 31ರ ತಡರಾತ್ರಿ ಕೇರಳದ ಕೊಚ್ಚಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದ 2019ರ ಮಿಸ್ ಕೇರಳ ಅನ್ಸಿ ಕಬೀರ್ (24) ಹಾಗೂ ಅದೇ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದ ಅಂಜನಾ ಶಾಜನ್ (25) ಸಾವಿನ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

- Advertisement -

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಶುಕ್ರವಾರ, ಡ್ರಗ್ಸ್ ದಂಧೆಯ ಕಿಂಗ್’ಪಿನ್ ಶೈಜು ತಂಗಚ್ಚನ್ ಎಂಬಾತನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಚ್ಚಿ ಸಿಟಿ ಪೊಲೀಸ್ ಕಮಿಷನರ್ ಸಿಎಚ್ ನಾಗರಾಜು, ಘಟನೆ ನಡೆದ ರಾತ್ರಿ ಅನ್ಸಿ ಕಬೀರ್ ಹಾಗೂ ಅಂಜನಾ ಶಾಜನ್ ಸಂಚರಿಸುತ್ತಿದ್ದ ಕಾರನ್ನು ಯಾರೋ ಹಿಂಬಾಲಿಸುತ್ತಿರುವುದು ಗೊತ್ತಾದ ಕಾರಣ ಅಬ್ದುಲ್ ರಹಿಮಾನ್ ಅತಿ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ಅಪಘಾತವಾಗಿತ್ತು. ಅನ್ಸಿ ಕಬೀರ್ ಕಾರನ್ನು ದುರುದ್ದೇಶದಿಂದ ಶೈಜು ತಂಗಚ್ಚನ್ ಹಿಂಬಾಲಿಸಿದ್ದ ಎಂದು ಕಮಿಷನರ್ ಹೇಳಿದ್ದಾರೆ. ಕೊಚ್ಚಿ ನಗರದಲ್ಲಿ ನಡೆಯುವ DJ ಪಾರ್ಟಿಗಳಿಗೆ ಡ್ರಗ್ಸ್ ಪೂರೈಸುವುದು ಶೈಜು ತಂಗಚ್ಚನ್ ದಂಧೆಯಾಗಿತ್ತು.

ಅಕ್ಟೋಬರ್ 31ರ ತಡರಾತ್ರಿ ಕೇರಳದ ಕೊಚ್ಚಿಯಲ್ಲಿರುವ NO 18 ಹೊಟೇಲಿನಲ್ಲಿ ಡಿಜೆ ಪಾರ್ಟಿಯಲ್ಲಿ ಭಾಗವಹಿಸಿದ್ದ ಅನ್ಸಿ ಕಬೀರ್ ಹಾಗೂ ಅಂಜನಾ ಶಾಜನ್ ಜೊತೆ ಶೈಜು ತಂಗಚ್ಚನ್ ಕೆಟ್ಟದಾಗಿ ವರ್ತಿಸಿದ್ದ. ಈ ಕಾರಣದಿಂದಲೇ ಅವರು ಪಾರ್ಟಿಯಿಂದ ಅರ್ಧದಲ್ಲೇ ಹೊರಟಿದ್ದರು. ಆದರೆ ಇದರಿಂದ ಕುಪಿತನಾದ ಶೈಜು, ತನ್ನ ಸ್ನೇಹಿತರ ಜೊತೆ ತೆರಳಿದ್ದ ಅನ್ಸಿ ಕಬೀರ್ ಕಾರನ್ನು ಹಿಂಬಾಲಿಸಿದ್ದ ಎಂದು ಸಿಟಿ ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

- Advertisement -

ಮಾಡೆಲ್’ಗಳಿಬ್ಬರ ಸಾವಿಗೆ ಕಾರಣವಾದ ಅಪಘಾತದ ವೇಳೆ ಕಾರು ಚಲಾಯಿಸುತ್ತಿದ್ದ ಅಬ್ದುಲ್ ರಹಿಮಾನ್ ಹೇಳಿಕೆಯನ್ನು ಆಧರಿಸಿ ದೂರು ದಾಖಲಿಸಿಕೊಂಡಿದ್ದ ಕೊಚ್ಚಿ ಪೊಲೀಸರು ಶೈಜು ತಂಗಚ್ಚನ್’ಗಾಗಿ ಬಲೆಬೀಸಿದ್ದರು. ಶೈಜು ವಿರುದ್ಧ IPC ಕಾಯ್ದೆ 354-D ಹಿಂಬಾಲಿಸುವುದು, 304 (ಸಾವಿಗೆ ಕಾರಣವಾದ ನಿರ್ಲ್ಯಕ್ಷ್ಯ) ಸೇರಿದಂತೆ ವಿವಿಧ ಸೆಕ್ಷನ್’ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕೊಚ್ಚಿ ಸಿಟಿ ಪೊಲೀಸ್ ಕಮಿಷನರ್ ಸಿಎಚ್ ನಾಗರಾಜು ಹೇಳಿದ್ದಾರೆ.

ಘಟನೆ ನಡೆದ ಬಳಿಕ ಶೈಜು ತಂಗಚ್ಚನ್ ತಲೆಮರೆಸಿಕೊಂಡಿದ್ದ ಹಾಗೂ ಹೈಕೋರ್ಟ್’ನಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಪ್ರಯತ್ನಿಸಿ ವಿಫಲನಾಗಿದ್ದ.

ಅಕ್ಟೋಬರ್ 31ರ ತಡರಾತ್ರಿ ಕೇರಳದ ಕೊಚ್ಚಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ 2019ರ ಮಿಸ್ ಕೇರಳ ಅನ್ಸಿ ಕಬೀರ್ (24) ಹಾಗೂ ಅದೇ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದ ಅಂಜನಾ ಶಾಜನ್ (25) ಹಾಗೂ ಸ್ನೇಹಿತ ಆಶಿಕ್ ದಾರುಣವಾಗಿ ಮೃತಪಟ್ಟಿದ್ದರು. ಬೈಕ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ವೇಳೆ ರಸ್ತೆ ಬದಿಯಲ್ಲಿದ್ದ ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.

ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಅಪಘಾತವೆಂಬಂತೆ ಕಂಡುಬಂದರೂ ಪೊಲೀಸ್ ತನಿಖೆಯ ವೇಳೆ ಹಲವು ಗಂಭೀರ ವಿಷಯಗಳು ಬಹಿರಂಗವಾಗಿತ್ತು. ಪ್ರಮುಖವಾಗಿ ಕೊಚ್ಚಿ ನಗರದ CCTVಗಳನ್ನು ಪರಿಶೀಲಿಸಿದ್ದ ಪೊಲೀಸರಿಗೆ ಅಪಘಾತವಾದ ಕಾರನ್ನು ಮತ್ತೊಂದು ಕಾರು ವೇಗವಾಗಿ ಹಿಂಬಾಲಿಸುತ್ತಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದರು.



Join Whatsapp