ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರಿಂದ ‘ರಸ್ತೆಗುಂಡಿ ಪೂಜೆ’..!

Prasthutha|

ಬೆಂಗಳೂರು: ಕೆಟ್ಟುಹೋದ ರಸ್ತೆಗಳನ್ನು ದುರಸ್ತಿ ಮಾಡದ ಅಧಿಕಾರಿಗಳ ವಿರುದ್ಧ ರಸ್ತೆಗುಂಡಿಗಳಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿರುವುದನ್ನು ಬಹಳಷ್ಟು ನೋಡಿದ್ದೇವೆ. ಆದರೆ ಮಳೆಯಿಂದ ತೋಪೆದ್ದು ಹೋದ ರಸ್ತೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಿಲಿಕಾನ್ ಸಿಟಿ ಜನರು ರಸ್ತೆಗುಂಡಿಗಳಿಗೆ ಪೂಜೆ ಸಲ್ಲಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ನಗರದ ಚಾರ್ಲ್ಸ್ ಕ್ಯಾಂಬೆಲ್ ರಸ್ತೆಯಲ್ಲಿ ರಸ್ತೆ ಮಾಯವಾಗಿ ಕೇವಲ ಗುಂಡಿಗಳಷ್ಟೇ ಉಳಿದಿದೆ . ಈ ಹಿನ್ನೆಲೆಯಲ್ಲಿ ಭಾರತೀನಗರದ ನಿವಾಸಿಗಳ ಒಕ್ಕೂಟದ ವತಿಯಿಂದ ಅಧಿಕಾರಿಗಳ ಗಮನ ಸೆಳೆಯುವ ಸಲುವಾಗಿ ದೊಡ್ಡ ಗುಂಡಿಯೊಂದಕ್ಕೆ ಹೂವಿನ ಅಲಂಕಾರ ಮಾಡಿ ಇಬ್ಬರು ಪುರೋಹಿತರ ಸಮ್ಮುಖದಲ್ಲಿ ಯಜ್ಞ ಹಾಗೂ ಪೂಜಾ ವಿಧಿಗಳನ್ನು ನಡೆಸಲಾಯಿತು. ಪೂಜೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಗಳಲ್ಲಿ ವೈರಲ್ ಆಗಿದೆ.

ಚಾರ್ಲ್ಸ್ ಕ್ಯಾಂಬೆಲ್ ರಸ್ತೆಯೊಂದರಲ್ಲೇ ನೂರಕ್ಕೂ ಹೆಚ್ಚು ಗುಂಡಿಗಳಿದ್ದು, ವಾಹನ ಸವಾರರಿಗೆ ಈ ರಸ್ತೆಯಲ್ಲಿ ಸಂಚರಿಸುವುದು ನರಕಯಾತನೆಯಾಗಿದೆ ಎಂದು ಭಾರತೀನಗರದ ನಿವಾಸಿಗಳ ಒಕ್ಕೂಟದ ಅಧ್ಯಕ್ಷರಾದ NS ರವಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರವಾಗಿಲ್ಲ. ಏನಾದರೂ ಅಪಾಯ ಸಂಭವಿಸಿದ ಬಳಿಕವಷ್ಟೇ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಕಳೆದ 20 ವರ್ಷಗಳಿಂದ ಭಾರತಿ ನಗರದಲ್ಲಿ ವಾಸವಾಗಿರುವ ವಿಕ್ರಮ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.



Join Whatsapp