ಸ್ವೀಡನ್: ಸ್ವೀಡನ್ನ ಮೊಟ್ಟ ಮೊದಲ ಮಹಿಳಾ ಪ್ರಧಾನಿ ಎನಿಸಿಕೊಂಡ ಕೆಲ ಹೊತ್ತಿನಲ್ಲೇ ರಾಜೀನಾಮೆ ನೀಡಿದ್ದ ಮ್ಯಾಗ್ಡಲೀನಾ ಆಂಡರ್ಸನ್ ಮತ್ತೆ ಪ್ರಧಾನಿ ಪಟ್ಟಕ್ಕೇರಿದ್ದಾರೆ. ಕಳೆದ ಬುಧವಾರದಂದು ಅಧಿಕಾರಕ್ಕೆ ಬಂದು ಪಿಎಂ ಕುರ್ಚಿಯಲ್ಲಿ ಕುಳಿತ ಕೆಲವೇ ಗಂಟೆಗಳಲ್ಲಿ ಮ್ಯಾಗ್ಡಲೀನಾ ರಾಜೀನಾಮೆ ನೀಡಿದ್ದರು. ಪ್ರಥಮ ಪ್ರಧಾನ ಮಂತ್ರಿಯೆಂದು ಹೆಗ್ಗಳಿಕೆ ಪಡೆದು ಗಂಟೆಗಳಲ್ಲಿ ರಾಜೀನಾಮೆ ನೀಡಬೇಕಾಗಿ ಬಂದದ್ದು ದುರಂತ ಎಂದು ಹೇಳಲಾಗಿತ್ತು. ಆದರೆ ಸೋಮವಾರದಂದು ಮತ್ತೊಮ್ಮೆ ಪ್ರಧಾನ ಮಂತ್ರಿ ಸ್ಥಾನಕ್ಕೇರುವ ಮೂಲಕ ಅವರು ಸ್ವೀಡನ್ ನ ಮೊದಲ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ.
ಮ್ಯಾಗ್ಡಲೀನಾ ರವರ ಸೋಷಿಯಲ್ ಡೆಮಾಕ್ರಾಟಿಕ್ ಪಕ್ಷಕ್ಕೆ ಬಹುಮತದ ಕೊರತೆಯಿಂದ ಅವರು ರಾಜೀನಾಮೆ ನೀಡಿದ್ದರು. ಬಳಿಕ ಆ ಕೊರತೆಯನ್ನು ನೀಗಿಸಿ ಅವರು ಅಧಿಕಾರಕ್ಕೇರಿದ್ಧಾರೆ. ಸ್ವೀಡನ್ನ ಸಂಸತ್ತಿನಲ್ಲಿ ಸೋಮವಾರ ನಡೆದ ಮತದಾನದಲ್ಲಿ, ಸಂಸತ್ತಿನ 349 ಸದಸ್ಯರಲ್ಲಿ 173 ಮಂದಿ ಮ್ಯಾಗ್ಡಲೀನಾ ವಿರುದ್ಧವಾಗಿ ಮತ ಹಾಕಿದರೂ ಮ್ಯಾಗ್ಡಲೀನಾ ಅವರಿಗೆ ಅದರಿಂದೇನೂ ತೊಂದರೆ ಆಗಲಿಲ್ಲ. ಕಾರಣ, 101 ಸದಸ್ಯರು ಮ್ಯಾಗ್ಡಲೀನಾ ಪರವಾಗಿ ಮತ ಹಾಕಿದ್ದು, 75 ಮಂದಿ ಗೈರುಹಾಜರಾದರು. ಬಳಿಕ ಅಂತಿಮವಾಗಿ ಒಂದೇ ಒಂದು ಮತದಿಂದ ರೋಚಕ ಜಯ ದಾಖಲಿಸಿದ್ದರು.
ಆದಾಯ ಖರ್ಚು ವೆಚ್ಚಗಳ ಕುರಿತ ಯೋಜನೆಗಳನ್ನು ದೇಶದ ಸಂಸತ್ತು ತಿರಸ್ಕರಿಸಿದ ಬಳಿಕ ಮ್ಯಾಗ್ಡಲೀನಾರವರ ಗ್ರೀನ್ ಪಾರ್ಟಿ ಅಧಿಕಾರದಿಂದ ಹಿಂದೆ ಸರಿಯಲು ನಿರ್ಧರಿಸಿತ್ತು. ಆದರೆ ಪಿಎಂ ಸ್ಥಾನ ತೊರೆದ ಬಳಿಕ ಮ್ಯಾಗ್ಡಲೀನಾ, ಒಂದೇ ಪಕ್ಷದಿಂದ ಬಹುಮತ ಗಳಿಸಿ ಅಧಿಕಾರ ಗದ್ದುಗೆಗೇರಿ ಆ ಸರ್ಕಾರದ ನಾಯಕಿಯಾಗಿ ಮತ್ತೊಮ್ಮೆ ಪ್ರಧಾನಿಯಾಗಲು ಪ್ರಯತ್ನಿಸುವ ಭರವಸೆ ಇದೆ ಎಂದಿದ್ದರು. ಈ ರೀತಿ ಹೇಳಿಕೆ ನೀಡಿದ ಕೆಲ ದಿನಗಳ ಬಳಿಕ ಮತ್ತೊಮ್ಮೆ ಪ್ರಧಾನಿ ಹುದ್ದೆಗೇರಿದ ಸಾಧನೆಯನ್ನು ಮ್ಯಾಗ್ಡಲೀನಾ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಸ್ವೀಡಿಷ್ ಮಹಿಳೆಯರಿಗೆ ಮತಹಕ್ಕು ನೀಡಿದ ನೂರು ವರ್ಷಗಳ ನಂತರ, 54 ವರ್ಷ ವಯಸ್ಸಿನ ಸೋಶಿಯಲ್ ಡೆಮಾಕ್ರಟ್ ಅಧಿನಾಯಕಿ ಆ ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸಂಸತ್ತಿನ ವಿಭಾಗಗಳು ಅಥವಾ ರಿಕ್ಸ್ಡಾಗ್ನಲ್ಲಿ ಎಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆದು ಸ್ವಾಗತಿಸಿದರು.
ವಿಶ್ವವಿದ್ಯಾನಿಲಯದ ನಗರವಾದ ಉಪ್ಸಲಾ ಮೂಲದವರಾದ ಮ್ಯಾಗ್ಡಲೀನಾ ಆಂಡರ್ಸನ್ ಅವರು ಜೂನಿಯರ್ ಈಜು ಚಾಂಪಿಯನ್ ಆಗಿದ್ದವರು. 1996 ರಲ್ಲಿ ಆಗಿನ ಪ್ರಧಾನ ಮಂತ್ರಿ ಗೋರಾನ್ ಪರ್ಸನ್ ಅವರ ರಾಜಕೀಯ ಸಲಹೆಗಾರರಾಗಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಕಳೆದ ಏಳು ವರ್ಷಗಳಿಂದ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಮ್ಯಾಗ್ಡಲೀನಾ ಆಂಡರ್ಸನ್ ಅವರನ್ನು ಸಂಸದರು ಬೆಂಬಲಿಸಿ, ಪ್ರಧಾನಿ ಪಟ್ಟಕ್ಕೇರುವಂತೆ ಮಾಡುವ ಮೊದಲು, ಇಡೀ ನಾರ್ಡಿಕ್ ರಾಜ್ಯಗಳ ಪೈಕಿ ಸ್ವೀಡನ್ ಮಾತ್ರ ಮಹಿಳೆಯನ್ನು ಪ್ರಧಾನಿಯಾಗಿ ಹೊಂದಿಲ್ಲದ ದೇಶವಾಗಿತ್ತು. ಇದೀಗ ಸ್ವೀಡನ್ ನ ಮೊದಲ ಮಹಿಳಾ ಪ್ರಧಾನಿಯಾಗಿ ಮ್ಯಾಗ್ಡಲೀನಾ ಸರಕಾರವನ್ನು ಮುನ್ನಡೆಸುತ್ತಿದ್ದಾರೆ.