ಅನುಮಾನಗಳಿಗೆ ಎಡೆಮಾಡಿಕೊಟ್ಟ ಇಡಿ, ಸಿಬಿಐ ನಿರ್ದೇಶಕರ ಅಧಿಕಾರಾವಧಿ ವಿಸ್ತರಣೆ

Prasthutha|

ಸುಗ್ರಿವಾಜ್ಞೆ ಮೂಲಕವೇ ಮೂರು ರೈತ ವಿರೋಧಿ ಕಾಯಿದೆಗಳನ್ನು ತಂದಿದ್ದ ನರೇಂದ್ರ ಮೋದಿ ಸರಕಾರ ತನ್ನ ಸರ್ವಾಧಿಕಾರಿ ಪ್ರಭುತವನ್ನು ಸರಾಗವಾಗಿ ಮುಂದುರಿಸಲು ಅನುಕೂಲ ಆಗುವಂತೆ ತನಿಖಾ ಸಂಸ್ಥೆಗಳು, ಗುಪ್ತಚರ ಸಂಸ್ಥೆಗಳ ಮುಖ್ಯಸ್ಥರ ಅಧಿಕಾರಾವಧಿ ಐದು ವರ್ಷಗಳ ವಿಸ್ತರಿಸುವ ಸುಗ್ರವಾಜ್ಞೆ ಹೊರಡಿಸಿದೆ. ಮೊದಲಿಗೆ ಜಾರಿ ನಿರ್ದೇಶನಾಲಯ (ಇಡಿ)ಮತ್ತು ಕೇಂದ್ರ ತನಿಖಾ ದಳ (ಸಿಬಿಐ)ನಿರ್ದೇಶಕರ ಅವಧಿಯನ್ನು ಐದು ವರ್ಷಗಳವರೆಗೆ ವಿಸ್ತರಿಸುವ ಎರಡು ಸುಗ್ರೀವಾಜ್ಞೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಪ್ರಸ್ತುತ, ಎರಡೂ ಕೇಂದ್ರೀಯ ಸಂಸ್ಥೆಗಳ ಮುಖ್ಯಸ್ಥರ ಅಧಿಕಾರಾವಧಿ ಎರಡು ವರ್ಷವಿತ್ತು.

- Advertisement -

ಕೇಂದ್ರ ಜಾಗೃತ ಆಯೋಗ (ತಿದ್ದುಪಡಿ) ಸುಗ್ರೀವಾಜ್ಞೆ 2021 ಮತ್ತು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ)ಸುಗ್ರೀವಾಜ್ಞೆ 2021ನನ್ನು ಪ್ರಕಟಿಸಲಾಗಿದೆ. ಸಿಬಿಐ ಮತ್ತು ಇಡಿ ನಿರ್ದೇಶಕರ ಅಧಿಕಾರಾವಧಿ ಮುಗಿಯದ ಹೊರತು ಅವರನ್ನು ತೆಗೆದು ಹಾಕುವಂತಿಲ್ಲ. ಆದರೆ ಕೇಂದ್ರ ಸರ್ಕಾರವು ಅವರ ಅಧಿಕಾರಾವಧಿಯನ್ನು ವಿಸ್ತರಿಸಬಹುದು.

ಅನಂತರ ಆಂತರಿಕ ಗುಪ್ತಚರ ಸಂಸ್ಥೆ – ಐಬಿ, ವಿದೇಶಗಳಲ್ಲಿ ಗೂಢಚಾರಿಕೆ ಮಾಡುವ ರಾ ಸಂಸ್ಥೆ (ರಿಸರ್ಚ್ ಆ್ಯಂಡ್ ಅನಾಲಿಸಿಂಗ್ ವಿಂಗ್ ಆರ್‌ಎಡಬ್ಲ್ಯು) ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆ ಮಾಡಲಾಗಿದೆ.

- Advertisement -

ಭಾನುವಾರ ರಜಾದಿನಗಳಂದೇ ಇಂತಹ ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗುತ್ತದೆ. ಹೊಸ ಆದೇಶ ಪ್ರಕಾರ, ಸಿಬಿಐ ಅಥವಾ ಇಡಿ ನಿರ್ದೇಶಕರನ್ನು ಮೊದಲ ಎರಡು ವರ್ಷಗಳ ಅವಧಿಗೆ ನೇಮಿಸಬಹುದು. ಅಗತ್ಯವಿದ್ದರೆ, ಅಧಿಕಾರಾವಧಿಯನ್ನು ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ಇದಕ್ಕೆ ಮೂರು ಪ್ರತ್ಯೇಕ ವಾರ್ಷಿಕ ವಿಸ್ತರಣೆಗಳು ಬೇಕಾಗುತ್ತವೆ. ಐದು ವರ್ಷಗಳ ಅವಧಿಯ ನಂತರ ಇಡಿ ಅಥವಾ ಸಿಬಿಐ ಮುಖ್ಯಸ್ಥರಿಗೆ ಯಾವುದೇ ವಿಸ್ತರಣೆಯನ್ನು ನೀಡಲಾಗುವುದಿಲ್ಲ.

1997ಕ್ಕೂ ಮುನ್ನ ಸಿಬಿಐ ಮುಖ್ಯಸ್ಥರ ಅಧಿಕಾರ ಅವಧಿಯನ್ನು ನಿಗದಿಗೊಳಿಸಿರಲಿಲ್ಲ. ಅವರನ್ನು ಸರ್ಕಾರ ಯಾವುದೇ ಸಂದರ್ಭದಲ್ಲಿ ಹುದ್ದೆಯಿಂದ ಕಿತ್ತು ಹಾಕಬಹುದಾಗಿತ್ತು. ಆದರೆ ವಿನೀತ್ ರಂಜನ್ ಪ್ರಕರಣದಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಸಿಬಿಐ ನಿರ್ದೇಶಕರು ಸ್ವತಂತ್ರವಾಗಿ ಕೆಲಸ ಮಾಡುವುದರ ಜತೆಗೆ ಕನಿಷ್ಠ ಎರಡು ವರ್ಷದ ಅವಧಿಯ ಹುದ್ದೆಯನ್ನು ನಿಗದಿಗೊಳಿಸುವಂತೆ ಆದೇಶ ನೀಡಿತ್ತು.

ಪ್ರಸ್ತುತ ಈ ಎರಡೂ ತನಿಖಾ ಸಂಸ್ಥೆಗಳ ಮುಖ್ಯಸ್ಥರ ಅಧಿಕಾರ ಅವಧಿ ತಲಾ ಎರಡು ವರ್ಷಗಳು. ಅವರನ್ನು ಈ ಎರಡು ವರ್ಷಗಳ ಅವಧಿ ಅಂತ್ಯಗೊಳ್ಳುವವರೆಗೂ ಅಧಿಕಾರದಿಂದ ತೆಗೆದು ಹಾಕಲು ಅವಕಾಶವಿಲ್ಲ. ಆದರೆ, ಸರ್ಕಾರವು ಬಯಸಿದಲ್ಲಿ ಅವರನ್ನು ಹುದ್ದೆಯಲ್ಲಿ ಮುಂದುವರಿಸುವ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ.

ಕೇಂದ್ರ ಸರ್ಕಾರ ಹೊರಡಿಸಿದ ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ (ತಿದ್ದುಪಡಿ) ಸುಗ್ರೀವಾಜ್ಞೆ 2021ಪ್ರಕಾರ ನಿಯಮಾವಳಿಗಳ ಅಡಿಯಲ್ಲಿನ ಸಮಿತಿಯ ಶಿಫಾರಸಿನ ಅನ್ವಯ ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಜಾರಿ ನಿರ್ದೇಶನಾಲಯ ಕಚೇರಿ ಮುಖ್ಯಸ್ಥರ ಅಧಿಕಾರವನ್ನು ಆರಂಭಿಕ ನೇಮಕಾತಿಯಿಂದ ಒಂದು ಬಾರಿಗೆ ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ ಎಂದು ಸುಗ್ರೀವಾಜ್ಞೆಯಲ್ಲಿ ಹೇಳಲಾಗಿದೆ. ಮುಖ್ಯಸ್ಥರ ಅಧಿಕಾರವನ್ನು ವಿಸ್ತರಿಸುವಲ್ಲಿ ಇರುವ ಜನರ ಹಿತಾಸಕ್ತಿ ಏನು ಎಂಬುದು ಸ್ಪಷ್ಟವಿಲ್ಲ.ಆದರೆ, ಇದೊಂದು ಆಡಳಿತರೂಢ ಪಕ್ಷದ ಅನುಕೂಲ ಶಾಸ್ತ್ರವನ್ನು ಅವಲಲಂಬಿಸಿದೆ ಎಂಬುದು ಸ್ಪಷ್ಟವಾಗುತ್ತದೆ. ಈಗಾಗಲೇ ಸಿಬಿಐ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಗಳನ್ನು ಆಡಳಿತ ರೂಢ ಪಕ್ಷ ದುರುಪಯೋಗ ಮಾಡಿಕೊಳ್ಳುತ್ತಿರುವುದು ವ್ಯಾಪಕವಾಗ ಚರ್ಚೆ ಆಗುತ್ತಿದೆ.

ಸರಕಾರದ ತಪ್ಪುನೀತಿಗಳ ವಿರುದ್ಧ ಧ್ವನಿ ಎತ್ತುವ ಮಂದಿಯನ್ನು, ಪ್ರತಿಭಟನೆ ನೇತೃತ್ವ ವಹಿಸುವ ಮುಖಂಡರನ್ನು, ಪ್ರತಿಪಕ್ಷಗಳ ಮುಖಂಡರನ್ನು ಮಟ್ಟಹಾಕಲು ತನಿಖಾ ಸಂಸ್ಥೆಗಳನ್ನು ಯಾವ ಮುಲಾಜು ಇಲ್ಲದೆ ಯಥೇಚ್ಛವಾಗಿ ದುರುಪಯೋಗ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಯಾರ ಮನೆಗೆ ಈಡಿ, ಐಟಿ ದಾಳಿ ನಡೆಯಬಹುದು ಎಂಬುದನ್ನು ಈಗ ಸಾಮಾನ್ಯ ಜನರು ಕೂಡ ಊಹಿಸಬಲ್ಲರು. ಅಲ್ಲಿಯ ತನಕ ಇವುಗಳ ದುರುಪಯೋಗ ನಡೆಯುತ್ತಿದೆ.

ಪ್ರಸ್ತುತ ಸಂಸತ್ ಅಧಿವೇಶನ ನಡೆಯುತ್ತಿಲ್ಲವಾದ್ದರಿಂದ ಈ ತಕ್ಷಣದಿಂದಲೇ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಇಂತಹ ಮಹತ್ವದ ತಿದ್ದುಪಡಿಗಳನ್ನು ಸಂಸತ್ತಿನಲ್ಲಿ ಚರ್ಚಿಸಿ ತೀರ್ಮಾನ ಆಗಬೇಕಾಗಿತ್ತು. ಇಂದಿನ ಸರಕಾರದ ಬಹುತೇಕ ಮಹತ್ವದ ಕಾಯಿದೆಗಳು ಲೋಕಸಭೆಯಲ್ಲಿ ಚರ್ಚೆಗೆ ಬರುವುದೇ ಇಲ್ಲ ಯಾಕೆ ಎಂಬುದು ಜನರಿಗ ಗೊತ್ತಿದೆ. ಇಲ್ಲು ಕೂಡ ಅಂತಹುದೇ ಯತ್ನ ನಡೆದಿದೆ.

ಸಿಬಿಐ ನಿರ್ದೇಶಕರ ಅಧಿಕಾರ ಅವಧಿಯನ್ನು ದಿಲ್ಲಿ ವಿಶೇಷ ಪೊಲೀಸ್ ಸಂಸ್ಥಾಪನಾ ಕಾಯ್ದೆ, 1946ಕ್ಕೆ ತಿದ್ದುಪಡಿ ತರುವ ಮೂಲಕ ಬದಲಾವಣೆ ಮಾಡಲಾಗಿದೆ.ಇದೇ ರೀತಿ ಕೇಂದ್ರ ವಿಚಕ್ಷಣಾ ಆಯೋಗದ ಕಾಯ್ದೆ, 2003ಕ್ಕೆ ತಿದ್ದುಪಡಿ ತರುವ ಮೂಲಕ ಇ.ಡಿ ಮುಖ್ಯಸ್ಥರ ಅಧಿಕಾರ ಅವಧಿಯನ್ನು ಐದು ವರ್ಷಗಳವರೆಗೆ ವಿಸ್ತರಣೆ ಮಾಡಲಾಗಿದೆ. ಒಮ್ಮೆಲೆ ಒಂದು ವರ್ಷ ಅಧಿಕಾರ ವಿಸ್ತರಿಸುವ ಅವಕಾಶ ನೀಡಲಾಗಿದೆ.

ಈ ವರ್ಷದ ಮೇ ತಿಂಗಳಲ್ಲಿ ಸಿಐಎಸ್‌ ಎಫ್ ಮುಖ್ಯಸ್ಥ ಸುಬೋದ್ ಜೈಸ್ವಾಲ್ ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ಅವರು 1985ರ ಬ್ಯಾಚ್‌ ನ ಮಹಾರಾಷ್ಟ್ರ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಐಆರ್ ಎಸ್ ಅಧಿಕಾರಿ ಸಂಜಯ್ ಕೆ ಮಿಶ್ರಾ ಅವರು ಜಾರಿ ನಿರ್ದೇಶನಾಲಯದ ಹಾಲಿ ಮುಖ್ಯಸ್ಥರಾಗಿದ್ದಾರೆ. ಕಳೆದ ವರ್ಷದ ನವೆಂಬರ್‌ ನಲ್ಲಿ ಸಂಜಯ್ ಮಿಶ್ರಾ ಅವರ ಅಧಿಕಾರ ಅವಧಿಯನ್ನು ಒಂದು ವರ್ಷ ವಿಸ್ತರಣೆ ಮಾಡಲಾಗಿತ್ತು. 2018ರಲ್ಲಿ ಮಿಶ್ರಾ ಅವರ ನೇಮಕವಾಗಿತ್ತು. 2020ರ ನವೆಂಬರ್‌ ನಲ್ಲಿ ಅವರ ಅಧಿಕಾರ ಅಂತ್ಯಗೊಳ್ಳಬೇಕಿತ್ತು. ಆದರೆ ಒಂದು ವರ್ಷ ವಿಸ್ತರಣೆ ನೀಡಲಾಗಿತ್ತು.

ಪ್ರತಿಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಚುನಾಯಿತ ಸರಕಾರಗಳನ್ನು ಅಸ್ಥಿರಗೊಳಿಸಲು ಮೋದಿ ಸರಕಾರ ಇಂತಹ ತನಿಖಾ ಸಂಸ್ಥೆಗಳನ್ನು ದುರುಪಯೋಗಮಾಡುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಈ ಮಧ್ಯೆ, ಸರಕಾರದ ಆ ಸುಗ್ರಿವಾಜ್ಞೆಗಳನ್ನು ರಾಜ್ಯಸಭೆಯಲ್ಲಿ ಪ್ರಶ್ನಿಸಲಾಗುವುದು ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.

ತನಿಖಾ ಸಂಸ್ಥೆಗಳ ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆಯಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಸಂಸ್ಥೆಗಳ ಸ್ವಾಯತ್ತೆಯನ್ನು ಬುಡಮೇಲು ಮಾಡುವ ಕೃತ್ಯವಾಗಿದ್ದು, ಜೀ ಹುಜೂರ್ ಅಧಿಕಾರಿಗಳನ್ನು ಮುಂದುರಿಸುವ ಮೂಲಕ ಆಡಳಿತ ಪಕ್ಷ ತನ್ನ ರಾಜಕೀಯ ಆಟಗಳನ್ನು ಆಡಲು ಸುಲಭವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇದು ವಾಸ್ತವ ವಿಚಾರ.

ದೇಶದ ಹಿರಿಯ ವಕೀಲರಾದ ಪ್ರಶಾಂಶ್ ಭೂಷಣ್ ಕೂಡ ಸರಕಾರದ ಕ್ರಮವನ್ನು ಕಟುವಾಗ ಟೀಕಿಸಿದ್ದು, ತನಿಖಾ ಸಂಸ್ಥೆಗಳ ಸ್ವಾತಂತ್ರ್ಯವನ್ನು ಇನ್ನಷ್ಟು ಶಿಥಿಲ ಮಾಡುವ ಕುತಂತ್ರ ಎಂದು ಹೇಳಿದ್ದಾರೆ.ಇನ್ನೆರಡು ವಾರಗಳಲ್ಲಿ ಸಂಸತ್ತಿನ ಅಧಿವೇಶನ ಆರಂಭವಾಗಲಿರುವಾಗ ತರಾತುರಿಯಲ್ಲಿ ಸುಗ್ರೀವಾಜ್ಞೆಯ ಮೊರೆ ಹೋಗಿರುವುದು ಇನ್ನಷ್ಟು ಅನುಮಾನಗಳಿಗೆ ಆಸ್ಪದ ನೀಡಿದೆ. ಅಧಿಕಾರದಲ್ಲಿದ್ದವರನ್ನು ಖುಷಿ ಮಾಡಿದರೆ ಹೆಚ್ಚುವರಿ ಮೂರು ವರ್ಷಗಳ ಸೇವಾ ವಿಸ್ತರಣೆ ದೊರೆಯುತ್ತದೆ. ಜಾರಿ ನಿರ್ದೇಶನಾಲಯದ ಮುಖ್ಯಸ್ಥ ಮಿಶ್ರಾ ಈಗಾಗಲೇ ಹಲವು ಪ್ರತಿಪಕ್ಷ ಮುಖಂಡರ ವಿರುದ್ಧ ವಿಚಾರಣೆ, ದಾಳಿ ನಡೆಸಿದ್ದಾರೆ. ಇಡಿ ನಿರ್ದೇಶಕ ಮಿಶ್ರಾ ಅಧಿಕಾರಾವಧಿ ವಿಸ್ತರಣೆ ವಿವಾದಾತ್ಮಕವಾಗಿದೆ. ಪ್ರತಿಕಪಕ್ಷ ಕಾಂಗ್ರೆಸ್ ಸರಕಾರದ ಕ್ರಮವನ್ನು ಸಂಸತ್ ಮತ್ತು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ಹೇಳಿದೆ.

Join Whatsapp